ಉಪ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೊಳಿಸಲು ದಸಂಸ ಒತ್ತಾಯ

KannadaprabhaNewsNetwork |  
Published : Sep 13, 2024, 01:37 AM IST
ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿಯನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ದಸಂಸ ಮುಖಂಡರು  ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ ವೃತ್ತದಲ್ಲಿ ಗುರುವಾರ ತಮಟೆ ಬಾರಿಸುವ ಮೂಲಕ ಚಳುವಳಿ ನಡೆಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಸುಪ್ರೀಂ ಕೋರ್ಟ್‌ನ ಆದೇಶದನ್ವಯ ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಶೀಘ್ರವೇ ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ದಸಂಸ ಮುಖಂಡರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಗುರುವಾರ ತಮಟೆ ಬಾರಿಸುವ ಮೂಲಕ ಚಳುವಳಿ ನಡೆಸಿದರು.

ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ತಮಟೆ ಬಾರಿಸುವ ಮೂಲಕ ಚಳುವಳಿ । ಶಿರಸ್ತೇದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಕ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸುಪ್ರೀಂ ಕೋರ್ಟ್‌ನ ಆದೇಶದನ್ವಯ ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಶೀಘ್ರವೇ ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ದಸಂಸ ಮುಖಂಡರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಗುರುವಾರ ತಮಟೆ ಬಾರಿಸುವ ಮೂಲಕ ಚಳುವಳಿ ನಡೆಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಎಲ್.ಎಸ್.ಶ್ರೀಕಾಂತ್ , ಸುಪ್ರೀಂ ಕೋರ್ಟ್‌ನ ತೀರ್ಪು ಐತಿಹಾಸಿಕವಾಗಿದೆ. ಕೂಡಲೇ ಅನುಷ್ಠಾನ ಹಾಗೂ ಹಕ್ಕೋತ್ತಾಯಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲ ಚಳುವಳಿ ಹಮ್ಮಿಕೊಂಡು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು. ಕಳೆದ ಮೂವತ್ತು ವರ್ಷಗಳಿಂದ ದಸಂಸ ಹೋರಾಟಕ್ಕೆ ಜಯ ಸಿಕ್ಕಿದೆ. ಅಲ್ಲದೇ ಮೀಸಲಾತಿ ವ್ಯವಸ್ಥೆಯಲ್ಲಿ ಬಹಳ ಮುಖ್ಯ ವಾದ ಹೆಜ್ಜೆಯಾಗಿದೆ. ಹಿಂದೆ ಈ ವಿಚಾರವಾಗಿ ಪರಸ್ಪರ ವಿರುದ್ಧ ತೀರ್ಪುಗಳನ್ನು ನ್ಯಾಯಾಲಯಗಳು ನೀಡಿದ್ದವು. ಇದೀಗ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ಮಂದಿ ನ್ಯಾಯ ಮೂರ್ತಿಗಳ ಸಂವಿಧಾನಿಕ ಪೀಠ ಈ ವಿಚಾರದಲ್ಲಿ ಗೊಂದಲ ಪರಿಹರಿಸಿದೆ ಎಂದು ತಿಳಿಸಿದರು.ಪ್ರಸ್ತುತ ಪರಿಶಿಷ್ಟ ಜಾತಿಗಳಲ್ಲಿ ನೂರಾರು ಉಪ ಜಾತಿಗಳಿವೆ. ಒಪ್ಪಿತವಾದ ಮಾನದಂಡಗಳು ಮತ್ತು ವಿಧಾನಗಳ ಮೂಲಕ ತುಲನಾತ್ಮಕವಾಗಿ ಜಾತಿಗಳ ಹಿಂದುಳಿದಿರುವಿಕೆ ನಿರ್ಣಯಿಸಬೇಕು. ಈ ಮಾನದಂಡಗಳು ಸರ್ಕಾರದಲ್ಲಿನ ಪ್ರಾತಿನಿಧ್ಯ ಮತ್ತು ಶಿಕ್ಷಣಕ್ಕೆ ಸೀಮಿತವಾಗಿರಬಾರದು. ಸಾಮಾಜಿಕ ಸ್ಥಾನಮಾನವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯದ ತೀರ್ಪಿನಲ್ಲಿದೆ ಎಂದು ಹೇಳಿದರು.ಒಳ ಮೀಸಲಾತಿ ನೀಡುವ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಹಿಂದೆ ಮುಖ್ಯ ಮಂತ್ರಿಗಳು ಆಗ್ರಹಿಸಿದ್ದರು. ಆದರೆ, ಒಳ ಮೀಸಲಾತಿ ಕುರಿತು ಇದ್ದ ಗೊಂದಲಗಳಿಗೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ. ಹೀಗಾಗಿ ಕೋರ್ಟ್ ಆದೇಶ ಹೊರಡಿಸಿ ತಿಂಗಳು ಕಳೆದರೂ ರಾಜ್ಯ ಸರ್ಕಾರ ಆದೇಶ ಅನುಷ್ಟಾಗೊಳಿಸದೇ ಬೇಜವಾಬ್ದಾರಿ ತೋರುತ್ತಿದೆ ಎಂದು ದೂರಿದರು.ದಸಂಸ ಸಂಸ್ಥಾಪಕ ಪ್ರೊ.ಕೃಷ್ಣಪ್ಪನವರ ಜನ್ಮದಿನವನ್ನು ರಾಜ್ಯ ಸರ್ಕಾರ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಬೇಕು. ಜೊತೆಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು. ಬಾಕಿ ಉಳಿದಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಒಳ ಮೀಸಲಾತಿ ಜಾರಿವರೆಗೂ ಎಲ್ಲಾ ಹೊಸ ನೇಮಕಾತಿ ಪ್ರಕ್ರಿಯೆ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.ಬಗರ್‌ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು. ಕಳೆದ ಎರಡ್ಮೂರು ತಲೆ ಮಾರುಗಳಿಂದ ಮೂರ್‍ನಾಲ್ಕು ಎಕರೆ ಅರಣ್ಯ ಭೂಮಿ ಸಾಗುವಳಿ ಮಾಡುತ್ತಾ ಜೀವನ ಸಾಗಿಸುತ್ತಿರುವ ಕೃಷಿ ಕಾರ್ಮಿಕರನ್ನು ದೌರ್ಜನ್ಯದಿಂದ ಒಕ್ಕಲೆಬ್ಬಿಸದೇ ಪರ್ಯಾಯ ಭೂಮಿ ನೀಡಬೇಕು. ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ವಸತಿ ನಿಲಯ ಮತ್ತು ವಸತಿ ಶಾಲೆ ಗಳಲ್ಲಿ ಹೊರ ಸಂಪನ್ಮೂಲದಡಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಆಜಾದ್‌ ಪಾರ್ಕ್ ವೃತ್ತದಿಂದ ಜಿಲಾಧಿಕಾರಿ ಕಚೇರಿವರೆಗೆ ದಸಂಸ ಮುಖಂಡರು ತಮಟೆ ಬಾರಿಸುತ್ತಾ ತೆರಳಿದರು. ಬಳಿಕ ಡಿಸಿ ಕಚೇರಿ ಶಿರಸ್ತೇದಾರ್ ಹೇಮಂತ್‌ಕುಮಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ದಸಂಸ ರಾಜ್ಯ ವಿಭಾಗೀಯ ಸಂಚಾಲಕ ಟಿ.ಮಂಜಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ನ.ರಾ.ಪುರ ರಾಮು, ಸಂಚಾಲಕಿ ಲತಾ, ತಾಲೂಕು ಸಂಚಾಲಕಿ ಪವಿತ್ರ, ಶೃಂಗೇರಿ ಕಾರ್ಯದರ್ಶಿ ಜಾರ್ಜ್, ಜಿಲ್ಲಾ ಮಾದಿಗ ಮಹಾಸಭಾ ಜಿಲ್ಲಾಧ್ಯಕ್ಷ ರಮೇಶ್, ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ರಮೇಶ್, ಮುಖಂಡರಾದ ವಕೀಲ ಅನಿಲ್‌ ಕುಮಾರ್, ಮರ್ಲೆ ಅಣ್ಣಯ್ಯ, ಲಾರೆನ್ಸ್, ರಾಗಿಣಿ, ಸುಧಾಕರ್, ಬಾಬು, ಗೋವಿಂದಪ್ಪ, ಅಣ್ಣಯ್ಯ, ಪರಮೇಶ್ ಪಾಲ್ಗೊಂಡಿದ್ದರು. 12 ಕೆಸಿಕೆಎಂ 3ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲಾತಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ದಸಂಸ ಮುಖಂಡರು ಚಿಕ್ಕಮಗಳೂರಿನ ಆಜಾದ್‌ ಪಾರ್ಕ್ ವೃತ್ತದಲ್ಲಿ ಗುರುವಾರ ತಮಟೆ ಚಳುವಳಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ