ಬಳ್ಳಾರಿ: ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳಕ್ಕೆ ಗಂಗಾಜಲ ಸಿಂಪಡಿಸಿ ಶುದ್ಧೀಕರಿಸಿದ ಘಟನೆಯನ್ನು ಖಂಡಿಸಿ ಡಾ. ಜಿ. ಸಾಗರ್ ಬಣದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಹಿರಿಯ ರಾಜಕಾರಣಿ, ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ದಲಿತ ಸಮುದಾಯದ ಗೌರವದ ಪ್ರತೀಕವಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಗಂಗಾಜಲ ಸಿಂಪಡಿಸಿ ಶುದ್ಧೀಕರಿಸಿರುವುದು ಅತ್ಯಂತ ಖಂಡನೀಯ. ಈ ಕೃತ್ಯ ಕೇವಲ ಖರ್ಗೆ ಅವರಿಗೆ ಮಾಡಿದ ಅವಮಾನವಲ್ಲ, ಇಡೀ ದಲಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನ ಜಾರಿಗೆ ಬಂದು ಹಲವು ದಶಕಗಳು ಕಳೆದರೂ ಸಮಾಜದಲ್ಲಿ ಜಾತಿ ತಾರತಮ್ಯ ಹಾಗೂ ಅಸ್ಪೃಶ್ಯತೆಯ ಮನೋಭಾವ ಸಂಪೂರ್ಣವಾಗಿ ನಿರ್ಮೂಲನೆಯಾಗದಿರುವುದು ವಿಷಾದಕರ. ಅಸ್ಪೃಶ್ಯತೆ ವಿರುದ್ಧ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರು ನಡೆಸಿದ ಹೋರಾಟಗಳಿಗೆ ಇಂತಹ ಘಟನೆಗಳು ಅಣಕಿಸಿದಂತಾಗಿದೆ. ದೇಶದಲ್ಲಿ ಅಸ್ಪೃಶ್ಯ ಆಚರಣೆಗಳು ಇನ್ನೂ ಜೀವಂತವಾಗಿವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ರಾಜ್ಯ ಸಂಚಾಲಕ ಎ. ಮಾನಯ್ಯ ಮಾತನಾಡಿ, ಭಾರತದ ಎಲ್ಲ ಶೋಷಿತ ಹಾಗೂ ಹಿಂದುಳಿದ ಸಮುದಾಯಗಳಿಗೆ ಸಂವಿಧಾನ ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ಹಕ್ಕುಗಳನ್ನು ನೀಡಿದೆ. ಸಂವಿಧಾನ ರಚನೆಯಾಗಿ 77 ವರ್ಷಗಳು ಕಳೆದರೂ ಮನುಸ್ಮೃತಿ ಆಧಾರಿತ ಜಾತಿ ಮನೋಭಾವ ಹೊಂದಿರುವ ಕೆಲವರ ಮನಸ್ಸುಗಳು ಬದಲಾಗದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಿದರು.ರಾಮಲೀಲಾ ಮೈದಾನದಲ್ಲಿ ನಡೆದಿರುವ ಘಟನೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಮಾಡಿದ ಅಪಮಾನವಲ್ಲ. ದೇಶದ ಕೋಟ್ಯಂತರ ದಲಿತರ ಆತ್ಮಗೌರವಕ್ಕೆ ಧಕ್ಕೆ ತರುವ ಕೃತ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು ಎಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಘಟನೆಯಲ್ಲಿ ಭಾಗಿಯಾದವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು. ಸಮಾಜದಲ್ಲಿ ಜಾತಿ ದ್ವೇಷ ಹಾಗೂ ಅಸ್ಪೃಶ್ಯತೆಯ ಭಾವನೆಗಳನ್ನು ಪ್ರಚೋದಿಸುವಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಮುಖರಾದ ರಮೇಶ್ ಬಿಸಿಲಹಳ್ಳಿ, ಹುಲುಗಪ್ಪ ಬೆಳಗಲ್, ಎರಿಸ್ವಾಮಿ, ಪಂಪಾಪತಿ, ದೊಡ್ಡ ಬಸಪ್ಪ, ರಾಮಯ್ಯ, ಗಾದಿಲಿಂಗನಗೌಡ, ಅಸಂಡಿ ಶ್ರೀನಿವಾಸ್, ಲಿಂಗಪ್ಪ ಬಿಸಿಲಹಳ್ಳಿ ಸೇರಿದಂತೆ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿದ ಘಟನೆ ಖಂಡಿಸಿ ಡಾ. ಜಿ. ಸಾಗರ್ ಬಣದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬಳ್ಳಾರಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.