ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಎದುರು ವಿಬಿ ಜಿ ರಾಮ್ ಜಿ ಯೋಜನೆಯಡಿ ದುಡಿದ ಕೂಲಿ ಹಣ ವಿಳಂಬ ಖಂಡಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಹಾವೇರಿ: ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡಿದರೂ ಕಳೆದೊಂದು ತಿಂಗಳಿಂದ ಕೂಲಿ ಹಣ ಪಾವತಿಯಾಗಿಲ್ಲ ಎಂದು ಆರೋಪಿಸಿ ಕಾರ್ಮಿಕರು ಹಾವೇರಿ ತಾಲೂಕು ಕನವಳ್ಳಿ ಗ್ರಾಮ ಪಂಚಾಯಿತಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕನವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೆರೆಗೆ ನೀರು ಹರಿದುಬರಲು ಕಾಲುವೆ ನಿರ್ಮಾಣ, ಭರಡಿ ರಸ್ತೆ, ಭರಡಿ ರಸ್ತೆಯಿಂದ ಬಸಾಪುರ ಹದ್ದಿನವರೆಗೆ ರಸ್ತೆ ಕಾಮಗಾರಿ, ಕಲ್ಲೇದೇವರ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಯೋಜನೆಯಡಿ ಕೈಗೊಳ್ಳಲಾಗಿದೆ. ಪ್ರತಿದಿನ ಸುಮಾರು 200 ರಿಂದ 250 ಕಾರ್ಮಿಕರು ಕಾಮಗಾರಿಗಳಲ್ಲಿ ಕೆಲಸ ಮಾಡಿದ್ದು, ಸುಮಾರು 30 ಲಕ್ಷ ರು. ಕೂಲಿ ಹಣ ಪಾವತಿಯಾಗಬೇಕಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪಂಚಾಯಿತಿ ಖಾತೆಗೆ 38 ಲಕ್ಷ ರು. ಜಮೆಯಾಗಿದ್ದು, ಕೆ-2 ಮೂಲಕ ಹಣ ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆ.12ರಂದು ಪಂಚಾಯಿತಿ ಖಾತೆಗೆ ಹಣ ಜಮೆಯಾಗಿದ್ದರೂ, ಇದುವರೆಗೆ ಕಾರ್ಮಿಕರ ಖಾತೆಗಳಿಗೆ ಕೂಲಿ ಹಣ ವರ್ಗಾವಣೆಯಾಗಿಲ್ಲ. ಪಿಡಿಒ ಅವರನ್ನು ವಿಚಾರಿಸಿದಾಗ `ಹಣ ಬಂದಿದೆ, ಆದರೆ ಪ್ರೊಸೆಸ್ ಆಗುತ್ತಿಲ್ಲ'''''''' ಎಂಬ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದರು.

ನರೇಗಾ ಕೂಲಿ ಹಣವನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಮಕ್ಕಳ ಶಿಕ್ಷಣ, ಹಬ್ಬ-ಹರಿದಿನದ ಖರ್ಚು ಎದುರಾಗಿದೆ. ದುಡಿದ ಹಣ ಸಿಗದಿದ್ದರೆ ಕುಟುಂಬ ನಿರ್ವಹಣೆ ಹೇಗೆ? ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ವಯೋವೃದ್ಧರಿಗೆ ಆರೋಗ್ಯ ಸಮಸ್ಯೆಯಿದ್ದು, ಔಷಧಿ ಖರೀದಿಸಲೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.

ಗ್ರಾಪಂ ಮಾಜಿ ಸದಸ್ಯ ಹಾಗೂ ಕಾರ್ಮಿಕ ಶಿವಪ್ಪ ಮರಗಾಲ, ಪರಮೇಶ್ವರ ದೊಡ್ಡಜಾಲಿ, ಕಾರ್ಮಿಕ ಪಾಲಕ್ಷಯ್ಯ ಹಿರಿಯಾಳಮಠ ಮಾತನಾಡಿ, ಬಡ ಕಾರ್ಮಿಕರ ಕುಟುಂಬಗಳು ಕೂಲಿ ಹಣವನ್ನೇ ಅವಲಂಬಿಸಿವೆ. ಕೂಡಲೇ ಹಣ ಜಮೆ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪರಮೇಶ್ವರ ಧೂಳಣ್ಣನವರ, ಸೋಮಣ್ಣ ಆರೇರ, ಪಾರಮ್ಮ ಸೋಮನಕಟ್ಟಿ, ಶಿವಣ್ಣ ಹಾವೇರಿ, ನಾಗಪ್ಪ ಹರವಿ, ಮಾರುತಿ ಶಿಂಧೆ, ಯಲ್ಲಪ್ಪ ಕಾಳಶೆಟ್ಟಿ, ಸತೀಶ ಕತ್ತೆಬೆನ್ನೂರ, ಮೂಕಪ್ಪ ಹರವಿ, ಕೊಟ್ರಯ್ಯ ಪೂಜಾರ, ಮುತ್ತುರಾಜ ಧೂಳಣ್ಣನವರ, ತಿರಕಪ್ಪ ಗೋಣಿ, ಶರಣಯ್ಯ ಮಠಪತಿ, ಕಲ್ಲನಗೌಡ ಹುಚ್ಚನಗೌಡ್ರ, ಬಸವರಾಜ ಗೋಣಿ, ಮೂಕಪ್ಪ ಶಿಡೇನೂರ, ಶಿವಯೋಗಿ ಕತ್ತೆಬೆನ್ನೂರ, ಮಾಲತೇಶ ಪಿಡ್ಡೆಣ್ಣನವರ, ಈರಣ್ಣ ಜಾಡರ, ಮಂಜುನಾಥ ಶಿಡೇನೂರ, ಪರಶುರಾಮ ಕತ್ತೆಬೆನ್ನೂರ ಸೇರಿದಂತೆ ಅನೇಕ ಕಾರ್ಮಿಕರು ಇದ್ದರು.