- ರಾಜಕೀಯ ಸ್ವಾರ್ಥಕ್ಕಾಗಿ ದೇಶವನ್ನು ಧರ್ಮ, ಜಾತಿ ಹೆಸರಲ್ಲಿ ಒಡೆಯಲಾಗುತ್ತಿದೆ----
ಅಸ್ಸಾಂನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿರುವುದನ್ನು ಖಂಡಿಸಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯವರು ನಗರದ ದಾಸಪ್ಪ ವೃತ್ತದಲ್ಲಿರುವ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಸಮಾಜದ ಎಲ್ಲರಿಗೂ ಸಮಾನತೆ, ಸೌಲಭ್ಯ, ನ್ಯಾಯ ದೊರೆತಾಗ ಮಾತ್ರ ರಾಮರಾಜ್ಯ ಆಗುತ್ತದೆ. ಆದರೆ, ರಾಹುಲ್ ಗಾಂಧಿ ಅವರ ನ್ಯಾಯ ಯಾತ್ರೆಯ ಮೇಲೆ ದಾಳಿ ನಡೆಯುತ್ತಿರುವಾಗ ನ್ಯಾಯ ಸಿಗಲು ಹೇಗೆ ಸಾಧ್ಯ, ರಾಮರಾಜ್ಯ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ರಾಜಕೀಯ ಸ್ವಾರ್ಥಕ್ಕಾಗಿ ಇಂದು ದೇಶವನ್ನು ಧರ್ಮ, ಜಾತಿ ಹೆಸರಲ್ಲಿ ಒಡೆಯಲಾಗುತ್ತಿದೆ. ಇದು ದೇಶದ ಸಮಗ್ರತೆ, ಸಾರ್ವಭೌಮತ್ವಕ್ಕೆ ಮಾರಕವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ಬಾವುಟ ಹಿಡಿದು ಬಂದ ಗುಂಪು ನ್ಯಾಯ ಯಾತ್ರೆಗೆ ಅಡ್ಡಿಪಡಿಸುತ್ತಿದೆ. ಆದರೆ, ನ್ಯಾಯ ಯಾತ್ರೆ ನಿಲ್ಲುವುದಿಲ್ಲ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಮತ್ತು ನ್ಯಾಯ ಯಾತ್ರೆಗೆ ದೇಶಾದ್ಯಂತ ದೊರಕುತ್ತಿರುವ ಜನ ಬೆಂಬಲದಿಂದ ಬಿಜೆಪಿ ವಿಚಲಿತವಾಗಿದೆ. ಹೀಗಾಗಿಯೇ ಈ ರೀತಿ ದಾಳಿ ಮಾಡುತ್ತಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲಾ ಪಕ್ಷಗಳಿಗೂ ಸಮಾನವಾದ ಅವಕಾಶ ಇರಬೇಕು ಎಂದು ಅವರು ಒತ್ತಾಯಿಸಿದರು.
----
ಗೂಂಡಾಗಳಿಗೆ ಬಾಡಿಗೆ ನೀಡಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ನಿಲ್ಲಿಸಲು ಬಿಜೆಪಿಯವರು ಯತ್ನಿಸಿದ್ದಾರೆ. ಯಾತ್ರೆಯಲ್ಲಿ ಮೋದಿ, ಶ್ರೀರಾಮನಿಗೆ ಜೈಕಾರ ಕೂಗಿ ಪ್ರಚೋದಿಸಲು ಯತ್ನಿಸಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ರಾಹಲ್ ಗಾಂಧಿಯವರ ಯಾತ್ರೆ ನಿಲ್ಲುವುದಿಲ್ಲ. ಬಿಜೆಪಿಯವರ ಯಾವುದೇ ಆಟವೂ ನಡೆಯುವುದಿಲ್ಲ.