)
-ದಸರಾ ಮೆರವಣಿಗೆ: ಅಂಬಾರಿ ಹೊತ್ತ ಸೋಮಣ್ಣ ಆನೆ ಗಲಿಬಿಲಿಗೊಂಡು ಓಡಿದ ಪ್ರಕರಣ । 5 ದಿನಗಳ ಧಾರ್ಮಿಕ ವಿಧಿವಿಧಾನ ಯಶಸ್ವಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ದಸರಾ ಮೆರವಣಿಗೆಯ ವೇಳೆ ಅಂಬಾರಿ ಹೊತ್ತ ಸೋಮಣ್ಣ ಆನೆ ಗಲಿಬಿಲಿಗೊಂಡು ಓಡಿದಾಗ ಬೆಳ್ಳಿ ಅಂಬಾರಿ ಕಳಚಿ ಬಿದ್ದು, ತಾಯಿ ಚಾಮುಂಡೇಶ್ವರಿ ದೇವಿಯ ವಿಗ್ರಹಕ್ಕೆ ಹಾನಿಯಾಗಿದ್ದ ಹಿನ್ನೆಲೆ ಈ ಅವಘಡದ ದೋಷ ಪರಿಹಾರಕ್ಕಾಗಿ ಶಿವಮೊಗ್ಗದ ಪ್ರಮುಖ ದೇವಾಲಯಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಐದು ದಿನಗಳ ವಿಶೇಷ "ಪ್ರಾಯಶ್ಚಿತ್ತ ಹೋಮ " ಹಾಗೂ ಧಾರ್ಮಿಕ ವಿಧಿವಿಧಾನಗಳು ಯಶಸ್ವಿಯಾಗಿ ಸಂಪನ್ನಗೊಂಡಿವೆ.ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಪಂಡಿತರ ಸೂಚನೆಯಂತೆ ನವೆಂಬರ್ 3 ರಿಂದ ನವೆಂಬರ್ 7 ರವರೆಗೆ ನಗರದ ಕೋಟೆ ಚಂಡಿಕಾ ಪರಮೇಶ್ವರಿ ದೇವಾಲಯ ಹಾಗೂ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಈ ವಿಶೇಷ ಪೂಜೆಗಳು ಜರುಗಿದವು.
ಶಿವಮೊಗ್ಗ ದಸರಾ ಮೆರವಣಿಗೆ ವೇಳೆ ನಡೆದ ಅಹಿತಕರ ಘಟನೆಗೆ ಪರಿಹಾರವಾಗಿ ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ಮತ್ತು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರಾಯಶ್ಚಿತ್ತ ಹೋಮ ಆಯೋಜಿಸಲಾಗಿತ್ತು.
ಕೊನೆಯ ದಿನ ನಡೆದ ಹಿತ್ತಾಳೆಯ ಗಜವಾಹನೋತ್ಸವ, ಅಮ್ಮನವರ ತ್ರಿಶೂಲ ಇಟ್ಟು ಆನೆಯು ಚಲಿಸಿದ ರಸ್ತೆಯಲ್ಲಿ ಉತ್ಸವ, ಸೋಮಣ್ಣ ಆನೆ ಅಂಬಾರಿ ಹೊತ್ತು ಚಲಿಸಿದ ಮಾರ್ಗಗಳಲ್ಲಿ ಗಜ ವಾಹನೋತ್ಸವ, ಹಿತ್ತಾಳೆಯ ಆನೆಯ ಉತ್ಸವಮೂರ್ತಿ ಮತ್ತು ಅಮ್ಮನವರ ಉತ್ಸವ ಮೂರ್ತಿಗಳ ಮೆರವಣಿಗೆ, ಆನೆ ಮರಕ್ಕೆ ಡಿಕ್ಕಿ ಹೊಡೆದ ಜಾಗ, ಕಾರುಗಳನ್ನು ಜಖಂಗೊಳಿಸಿದ್ದ ಜಾಗ, ಆನೆ ಅಂಬಾರಿ ಮತ್ತು ವಿಗ್ರಹಗಳನ್ನು ಕೆಳಗೆ ಬೀಳಿಸಿದ ಜಾಗ, ಆನೆ ಅಂಬಾರಿ ಹೊತ್ತು ಓಡಿದ ಜಾಗಗಳೆಲ್ಲ ಪ್ರೋಕ್ಷಣೆ ಮತ್ತು ಉತ್ಸವ ಮೂರ್ತಿ ಮೆರವಣಿಗೆ ನಡೆಸಲಾಗಿದ್ದು. ಮೆರವಣಿಗೆಯಲ್ಲಿ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮತ್ತು ಸಿಬ್ಬಂದಿ, ದೇಗುಲ ಸಮಿತಿಯ ಅಧ್ಯಕ್ಷ ದೇವೇಂದ್ರಪ್ಪ ಹಾಗೂ ಸದಸ್ಯರು ಸೇರಿದಂತೆ ಅರ್ಚಕರು ಭಾಗಿಯಾಗಿದ್ದರು.
ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದ ಮೂರು ಪಳಗಿದ ಆನೆಗಳನ್ನು ಶಿವಮೊಗ್ಗ ನಗರಕ್ಕೆ ಕರೆತರಲಾಗಿತ್ತು.