ದಸರಾ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ

KannadaprabhaNewsNetwork |  
Published : Jul 07, 2025, 11:48 PM IST
ದಸರಾ ಆಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಒತ್ತಾಯಿಸಿ ಪ್ರತಿಭಟನೆ, ಮನವಿ | Kannada Prabha

ಸಾರಾಂಶ

ಚಾಮರಾಜನಗರದಲ್ಲಿ ದಸರಾ ಆಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಆಗ್ರಹಿಸಿ ಜಿಲ್ಲಾ ಕಲಾವಿದರ ಒಕ್ಕೂಟದಿಂದ ಪ್ರತಿಭಟನೆ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರದಲ್ಲಿ ದಸರಾ ಆಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಆಗ್ರಹಿಸಿ ಜಿಲ್ಲಾ ಕಲಾವಿದರ ಒಕ್ಕೂಟದಿಂದ ಪ್ರತಿಭಟನೆ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ನಗರದ ಚಾಮರಾಜೇಶ್ವರ ದೇವಸ್ಥಾನದ ವಿವಿಧ ವೇಷಭೂಷಣ ತೊಟ್ಟು, ಜಾನಪದ ಕಲಾ ಪ್ರಕಾರಗಳನ್ನು ಹಿಡಿದು ಜಮವಣೆಗೊಂಡ ಪ್ರತಿಭಟನಾಕಾರರು ಅಲ್ಲಿಂದ ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ೧೯೯೭ರಲ್ಲಿ ಜಿಲ್ಲೆಯಾಗಿ ಪ್ರತ್ಯೇಕಗೊಂಡಿತು. ಇಲ್ಲಿ ಸರ್ಕಾರದಿಂದಲೇ ೨೦೦೭ರಿಂದ "ಗ್ರಾಮೀಣ ದಸರಾ " ಎಂಬ ಹೆಸರಿನಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು.೨೦೧೩ರಿಂದ "ಚಾಮರಾಜನಗರ ದಸರಾ ಎಂಬ ಹೆಸರಿನಿಂದಲೇ ದಸರಾ ಉತ್ಸವಗಳು ಆಯೋಜನೆಗೊಳ್ಳುತ್ತಿದ್ದರು. ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಆದೇಶದ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಎಸ್. ಮಹದೇವ ಪ್ರಸಾದ್‌ ದಸರಾ ಆಚರಿಸಿದ್ದರು, ೨೦೧೫ರಲ್ಲಿ ಪ್ರವಾಹದ ಹಿನ್ನಲೆಯಲ್ಲಿ ದಸರಾ ಆಚರಣೆ ಇರಲಿಲ್ಲ ಎಂಬುದನ್ನು ಬಿಟ್ಟರೆ ಉಳಿದ ಎಲ್ಲಾ ವರ್ಷಗಳಲ್ಲಿ ಸಡಗರ ಸಂಭ್ರಮಗಳಿಂದ ದಸರಾ ಸಾಂಸ್ಕೃತಿಕ ಆಚರಣೆ ನಡೆದಿದೆ, ಜಿಲ್ಲೆಯ ಕಲಾವಿದರಿಗೆ ಸಾಕಷ್ಟುಅವಕಾಶಗಳು ದೊರೆತಿವೆ; ಇಲ್ಲಿನ ಜನರು ಕೂಡ ಸಂಭ್ರಮಿಸಿದ್ದಾರೆ.ಈ ಬಾರಿ ದಸರಾ ಆಚರಣೆಯನ್ನು ಚಾಮರಾಜನಗರದಲ್ಲಿ ನಡೆಸುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಜಿಲ್ಲೆಯ ಜನರಿಗೆ, ಕಲಾವಿದರಿಗೆ ನೋವು ಮತ್ತು ಅವಕಾಶ ವಂಚಿತರಾಗುವಂತೆ ಮಾಡಿದೆ. ಖಾಸಾ ಚಾಮರಾಜ ಒಡೆಯರ್ (೧೭೬೬-೧೭೯೬) ಚಾಮರಾಜನಗರದಲ್ಲಿ ಜನಿಸಿದರು. ಅವರು ಜನಿಸಿದ ಸ್ಥಳವನ್ನು ಜನನ ಮಂಟಪ ಎಂದು ಸ್ಮಾರಕಕವಾಗಿ ಘೊಷಿಸಿ ಸರ್ಕಾರವೇ ಸಂರಕ್ಷಿಸುತ್ತಿದೆ. ಚಾಮರಾಜನಗರ ಒಡೆಯರ್ ಅವರ ಮಗ ಮುಮ್ಮಡಿ ಕೃಷ್ಣರಾಜ ಒಡೆಯರ್ ಚಾಮರಾಜನಗರದ ಜೊತೆ ಹೆಚ್ಚು ಸಂಪರ್ಕ ಹೊಂದಿದ್ದರು. ಇಲ್ಲಿನ ಅಮಚವಾಡಿಯ ಲಿಂಗರಾಜರ ಮಗಳನ್ನು ವಿವಾಹವಾಗಿದ್ದರು. ಇವರ ತಂದೆಯಾದ ಚಾಮರಾಜ ಒಡೆಯರ್ ನೆನಪಿಗಾಗಿ "ಅರಿಕುಠಾರ " ಎಂದಿದ್ದ ಹೆಸರನ್ನು ಚಾಮರಾಜನಗರ ಎಂದು ನಾಮಕರಣ ಮಾಡಿದರು.

ಚಾಮರಾಜನಗರದ ಭೂ ಪ್ರದೇಶವು ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದಕ್ಕೆ ಹತ್ತಾರು ನಿದರ್ಶನಗಳು ಇತಿಹಾಸದ ದಾಖಲೆಗಳಲ್ಲಿವೆ. ಆ ಕಾರಣಕ್ಕಾಗಿಯೇ ಈವರೆವಿಗೂ ಇಲ್ಲಿ ದಸರಾ ಕಾರ್ಯಕ್ರಮಗಳು ನಡೆದಿವೆ. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ದಸರಾ ಕಾರ್ಯಕ್ರಮಗಳನ್ನು ಚಾಮರಾಜನಗರದಲ್ಲಿ ನಡೆಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ತಿಳಿಸಿದರು.

ಒಕ್ಕೂಟದ ಸೋಮಶೇಖರ್ ಬಿಸಲ್ವಾಡಿ, ಸಿ.ಎಂ. ನರಸಿಂಹಮೂರ್ತಿ, ಪುರುಷೋತ್ತಮ್‌, ಬಸವರಾಜು, ಜನಪದ ಮಹೇಶ್, ಕಲೆ ನಟರಾಜ್, ಶಿವಶಂಕರ ಚಟ್ಟು, ವೀರಗಾಸೆ ಜಯಕುಮಾರ, ಸಿದ್ದು, ಚಿತ್ರಬಿಳಿಗಿರಿ, ನಾರದ ವೆಂಕಟರಮಣಸ್ವಾಮಿ, ಡ್ರಾಮಾ ಮಾಸ್ಟರ್ ಶಿವಣ್ಣ, ರಿದಂ ರಾಮಣ್ಣ, ಸೋಬಾನೆ ಕಲಾವಿದೆ ಹೊನ್ನಮ್ಮ, ಚಿನ್ನಮ್ಮ, ತಂಬೂರಿ ತುಳಸಮ್ಮ, ಅವತಾರ ಪ್ರವೀಣ್, ಘಟಂ ಕೃಷ್ಣ, ಯುವ ಕಲಾವಿದ ಗುರುರಾಜು ಇದ್ದರು.

PREV