- ದಾವಣಗೆರೆಯಲ್ಲಿ ಹೊಸ ಸಿಎನ್‌ಜಿ ಸ್ಟೇಷನ್ಸ್-ಆಟೋ, ಕಾರು ಇತರೆ ವಾಹನ ಚಾಲಕರ ಹರ್ಷ
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಯಲ್ಲಿ ಕೊಂಚ ಸದ್ದು ಮಾಡಿದ್ದ ಸಿಎನ್‌ಜಿ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತವೆ. ಸಿಎನ್‌ಜಿ ಸಮಸ್ಯೆ ಬಗ್ಗೆ ಆಟೋ, ಕಾರು ಇತರೆ ವಾಹನಗಳ ಚಾಲಕರು ಸಮಸ್ಯೆ ಪರಿಹರಿಸುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಆಗ್ರಹಿಸಿದ್ದರು. ಈ ಕುರಿತು ಸಂಸದರ ಪ್ರಯತ್ನದ ಫಲವಾಗಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಮುಂದಿನ 6 ತಿಂಗಳಲ್ಲಿ ಇನ್ನೂ 3 ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.2 ತಿಂಗಳ ಹಿಂದೆ ನಗರದಲ್ಲಿ ಆಟೋ ರಿಕ್ಷಾ, ಕಾರು ಇತರೆ ಸಿಎನ್‌ಜಿ ಅವಲಂಬಿತ ವಾಹನಗಳ ಚಾಲಕರು, ಮಾಲೀಕರು ಜಿಲ್ಲೆಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ ಪೂರೈಕೆಯಲ್ಲಿ ಉಂಟಾದ ಸಮಸ್ಯೆ ಬಗ್ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಗಮನಕ್ಕೆ ತಂದಿದ್ದರು. ಜಿಲ್ಲಾ ಕೇಂದ್ರದಲ್ಲಿ ಸಿಎನ್‌ಜಿ ಪಂಪ್‌ಗಳನ್ನು ಹೆಚ್ಚಿಸಬೇಕು. ಇಲ್ಲವಾದರೆ ಸಮರ್ಪಕವಾಗಿ ಸಿಎನ್‌ಜಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಅರ್ಪಿಸಿದ್ದರು.
ಕೇಂದ್ರ ದಿಟ್ಟ ಹೆಜ್ಜೆ:
ಎಡಬಿಡದೇ ಸತತ ಪ್ರಯತ್ನ, ಪರಿಶ್ರಮದಿಂದ ದಾವಣಗೆರೆ ನಗರ, ಜಿಲ್ಲೆಯಲ್ಲಿ ಸಿಎನ್‌ಜಿ ಸಮಸ್ಯೆ ನಿವಾರಿಸುವಲ್ಲಿ ದಾಪುಗಾಲಿಡಲಾಗುತ್ತಿದೆ. ಇದರಿಂದ ಆಟೋ ರಿಕ್ಷಾ ಮತ್ತು ಕಾರು ಇತರೆ ವಾಹನ ಚಾಲಕರ ಅನೇಕ ದಿನಗಳ ಬೇಡಿಕೆಗೆ ಸ್ಪಂದಿಸಿದಂತಾಗಿದೆ. ಆದಷ್ಟು ಬೇಗನೆ ಸಿಎನ್‌ಜಿ ಸ್ಟೇಷನ್‌ಗಳನ್ನು ಆರಂಭಿಸುವಂತೆ ಕೇಂದ್ರ ಸರ್ಕಾರಕ್ಕೆ ಇದೇ ವೇಳೆ ಸಂಸದೆ ಡಾ.ಪ್ರಭಾ ಒತ್ತಾಯಿಸಿದ್ದಾರೆ.
ಸೀಮಿತ ಸಂಖ್ಯೆಯ ನಿಲ್ದಾಣಗಳು, ಆಟೋ ರಿಕ್ಷಾಗಳು, ಕಾರುಗಳು, ಸಾರಿಗೆ ವಾಹನಗಳು, ಬೈಕ್, ಬಸ್ಸು, ಟ್ರಕ್‌ಗಳಂತಹ ಸಿಎನ್‌ಜಿ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಳದಿಂದಾಗಿ ಸಿಎನ್‌ಜಿ ಪೂರೈಕೆಯಲ್ಲಿ ತೀವ್ರ ಕೊರತೆಯಾಗಿತ್ತು. ಕಳೆದ ಏಪ್ರಿಲ್ ಮೊದಲ ವಾರದಲ್ಲಂತೂ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಿಂದಾಗಿ ಪರಿಸ್ಥಿತಿ ಗಮನಾರ್ಹವಾಗಿ ಹದಗೆಟ್ಟಿತ್ತು ಎಂದು ಆಟೋ ರಿಕ್ಷಾ, ಇತರೆ ಸಿಎನ್‌ಜಿ ವಾಹನಗಳ ಚಾಲಕರು, ಮಾಲೀಕರು ವಿವರಿಸುತ್ತಾರೆ.
- - -
ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರಿಗೆ ಸಿಎನ್‌ಜಿ ಆಟೋ ರಿಕ್ಷಾ, ವಾಹನ ಮಾಲೀಕರು, ಚಾಲಕರು ಮನವಿ ಅರ್ಪಿಸಿದ ಸಂದರ್ಭದ ಸಂಗ್ರಹ ಚಿತ್ರ.