ಕನ್ನಡಪ್ರಭ ವಾರ್ತೆ ಸುರಪುರ
ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರನ್ನು ಜಿಲ್ಲೆಯಿಂದ ಅವಧಿಪೂರ್ವ ವರ್ಗಾವಣೆಗೊಳಿಸಿದರೆ ತಾಲೂಕು ಮತ್ತು ಜಿಲ್ಲಾ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿ ದಸಂಸ (ಕ್ರಾಂತಿಕಾರಿ ) ಬಣದ ಸದಸ್ಯರು ಸೋಮವಾರ ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಭಟಿಸಿದರು.ಈ ವೇಳೆ ಮಾತನಾಡಿದ ಹಲವು ಮುಖಂಡರು, ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟ, ಗಾಂಜಾ, ಇಸ್ಪೀಟ್, ಕೋಳಿ ಪಂದ್ಯಾಟ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಎಸ್‌ಪಿ ಪೃಥ್ವಿಕ್ ಶಂಕರ ಕಡಿವಾಣ ಹಾಕಿದ್ದರು. ಅಕ್ರಮ ದಂಧೆಕೋರರ ಜೊತೆ ಶಾಮೀಲಾಗಿರುವ ಜಿಲ್ಲೆಯ ಕೆಲವು ರಾಜಕೀಯ ಪ್ರಭಾವಿಗಳು ಅವಧಿಪೂರ್ವ ವರ್ಗಾವಣೆಗೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತುಗಳಿವೆ. ಇದು ನಿಯಮಗಳ ವಿರೋಧವಾಗುತ್ತದೆ, ಹಾಗೊಂದು ವೇಳೆ ಸರ್ಕಾರ ವರ್ಗಾವಣೆಗೆ ಮುಂದಾದರೆ ದಲಿತ ಸಂಘಟನೆಗಳು ತೀವ್ರ ಹೋರಾಟಕ್ಕಿಳಿಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಸಮಾಜದಲ್ಲಿ ಶಾಂತಿ, ಸುಭಿಕ್ಷೆ ತರಲು ಯತ್ನಿಸಿದವರನ್ನು ದಿಢೀರ್ ವರ್ಗಾಯಿಸುವುದು ಯಾವ ಕಾನೂನಲ್ಲಿದೆ ಎಂದು ಪ್ರಶ್ನಿಸಿದ ದಲಿತ ಮುಖಂಡರು, ನಿಷ್ಠಾವಂತರಿಗೆ ರಾಜ್ಯ ಕಾಂಗ್ರೆಸ್ ಸರಕಾರ ಸಹಕಾರ ನೀಡುವುದಿಲ್ಲವೇ? ಹಾಗಾದರೆ ನ್ಯಾಯಕ್ಕಾಗಿ ಯಾರನ್ನು ಕೇಳಬೇಕು ಎಂಬುದನ್ನು ಖಾರವಾಗಿ ಕೇಳಿದರು.ಗನ್ ಪರವಾನಗಿ ಪಡೆಯಲು ಅರ್ಹತೆಯಿದ್ದರೆ ಪೊಲೀಸ್ ಇಲಾಖೆ ನೀಡುತ್ತದೆ. ಅನರ್ಹರಿಗೆ ಹೇಗೆ ಕೊಡಲು ಸಾಧ್ಯ? ಅಕ್ರಮ ದಂಧೆಕೋರರಿಗೆ ರಾಜಕಾರಣಿಗಳು ಸೊಪ್ಪು ಹಾಕುತ್ತಿದ್ದಾರೆ. ಅಲ್ಲದೆ ಸ್ವಜಾತೀಯ ಪ್ರೇಮ ಹೆಚ್ಚಳವಾಗುತ್ತದೆ. ಇದು ಪ್ರಜಾಪ್ರಭುತ್ವ ಮತ್ತು ಸರಕಾರಕ್ಕೆ ಮಾರಕ ಎಂದು ದೂರಿದರು. ಜಿಲ್ಲೆಯಿಂದ ವರ್ಗಾಯಿಸಲು ಕನಿಷ್ಠ ಎರಡು ವರ್ಷಗಳ ಸೇವೆ ಸಲ್ಲಿಸಬೇಕು, ಒಂದು ವರ್ಷ ಸೇವೆಗೆ ಕಿರುಕಳ ನೀಡುವಂತಿಲ್ಲ. ತುರ್ತು ಎತ್ತಂಗಡಿ ಹಲವು ಅನುಮಾನ ಹುಟ್ಟು ಹಾಕಿದೆ. ವರ್ಗಾಯಿಸಿದರೆ ಸರಕಾರಗಳು ಜಾರಿಗೆ ತಂದಿರುವ ಕಾನೂನುಗಳಿಗೆ ಅವಮಾನ. ರಾಜ್ಯ ಸರಕಾರ ಪ್ರಾಮಾಣಿಕ ಅಧಿಕಾರಿಗಳನ್ನು ಬಳಸಿಕೊಂಡು ಅಕ್ರಮ ನಡೆಯುತ್ತಿರುವ ಜಾಗದಲ್ಲಿ ಸಕ್ರಮ ರೀತಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಪ್ರಸ್ತುತ, ಶಾಸಕರ ನೇತೃತ್ವದಲ್ಲೇ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ. ಇದಕ್ಕೆ ಸಹಕರಿಸದ ಅಧಿಕಾರಿಗಳನ್ನು ವರ್ಗಾಯಿಸಲು ಜಿಲ್ಲೆಯ ಕೆಲವು ರಾಜಕಾರಣಿಗಳು ಮುಂದಾಗಿರುವುದು ಖೇದನಿಯ ಸಂಗತಿ ಎಂದರು.
ಫೆಬ್ರವರಿಯಲ್ಲಿ ಅಧಿಕಾರ ಸ್ವೀಕರಿಸಿ ಜುಲೈನಲ್ಲಿ ವರ್ಗಾವಣೆ ಯಾದಗಿರಿ ಜಿಲ್ಲೆಗೆ ಅಂಟಿದ ಕಳಂಕವಾಗಿದೆ. ಎಸ್‌ಪಿ ವಿರುದ್ಧ ಯಾವುದೇ ದೂರಿಲ್ಲದೆ ವರ್ಗಾವಣೆ ಪ್ರಯತ್ನ ಯಾಕೆಂಬುದು ತಿಳಿಯದಾಗಿದೆ. ಸತ್ಯದ ಅಧಿಕಾರಕ್ಕಾಗಿ ಎಸ್‌ಪಿ ಪೃಥ್ವಿಕ್ ಶಂಕರ ಅವರನ್ನು . ಇಲ್ಲದದಿದ್ದರೆ ತಾಲೂಕು ಮತ್ತು ಜಿಲ್ಲಾ ಬಂದ್ ಮಾಡಿ ಪ್ರತಿಭಟಿಸುತ್ತೇವೆ. ಮುಂದಾಗುವ ಅನಾಹುತಗಳಿಗೆ ರಾಜ್ಯ ಸರಕಾರವೇ ನೆರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.ದಲಿತ ಮುಖಂಡರಿಂದ ಮನವಿ ಸ್ವೀಕರಿಸಿದ ಪಿಐ ಉಮೇಶ ಎಂ. ಮೇಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದರು. ಮಲ್ಲಿಕಾರ್ಜುನ ಕ್ರಾಂತಿ, ಮಾನಪ್ಪ ಕಟ್ಟಿಮನಿ, ಮಾನು ಗುರಿಕಾರ, ಚಂದ್ರಶೇಖರ ಹಸನಾಪುರ, ಮಲ್ಲಿಕಾರ್ಜುನ ತಳ್ಳಳ್ಳಿ, ಮೂರ್ತಿ ಬೊಮ್ಮನಹಳ್ಳಿ, ಬಸವರಾಜ ದೊಡ್ಡಮನಿ, ವೀರಭದ್ರಪ್ಪ ತಳವಾರಗೇರಾ, ಜಟ್ಟೆಪ್ಪ ನಾಗರಾಳ, ದೇವೇಂದ್ರಪ್ಪ ಬಾದ್ಯಾಪುರ, ಹಣಮಂತ ದೊರೆ, ಮಹೇಶ ಸುಂಗಲಕರ್, ಮಲ್ಲಪ್ಪ ಬಡಿಗೇರ, ಮರಿಲಿಂಗಪ್ಪ, ಹುಲಗಪ್ಪ, ಬಸವರಾಜ ಬೊಮ್ಮನಹಳ್ಳಿ ಸೇರಿದಂತೆ ಇತರರಿದ್ದರು.