ಕೊಪ್ಪಳದಲ್ಲಿ 17, 18ರಂದು ದಸರಾ ಸಂಭ್ರಮ: ದಾಂಡಿಯಾ ನೃತ್ಯ

KannadaprabhaNewsNetwork |  
Published : Oct 16, 2026, 02:15 AM IST
ರಾಜಶೇಖರ ಹಿಟ್ನಾಳ | Kannada Prabha

ಸಾರಾಂಶ

ಬರ ನಿವಾರಣೆಯಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸುವ ಉದ್ದೇಶದಿಂದ ಅ. 17 ಮತ್ತು 18ರಂದು ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ದಸರಾ ಮಹೋತ್ಸವ ಆಯೋಜಿಸಲಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದರು.

ಕೊಪ್ಪಳ: ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಮಳೆ ಕೊರತೆಯಿಂದ ಬೆಳೆ ಹಾನಿಯಾಗಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಬರ ನಿವಾರಣೆಯಾಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸುವ ಉದ್ದೇಶದಿಂದ ಅ. 17 ಮತ್ತು 18ರಂದು ಕೊಪ್ಪಳ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ದಸರಾ ಮಹೋತ್ಸವ ಆಯೋಜಿಸಲಾಗಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 17ರಂದು ಮಹಿಷಾಸುರ ಮರ್ದಿನಿ ರೂಪಕ ಹಾಗೂ ಅ. 18ರಂದು ದಾಂಡಿಯಾ ನೃತ್ಯ ನಡೆಯಲಿದೆ. ವಿವಿಧ ರಾಜ್ಯಗಳ ಕಲಾವಿದರು ಭಾಗವಹಿಸಲಿದ್ದು, ದೇವಿ ಪೂಜೆ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ ಎಂದರು.

ಮಹಿಳೆಯರು ಹಾಗೂ ದಂಪತಿಗಳು ದಾಂಡಿಯಾ ನೃತ್ಯದಲ್ಲಿ ಭಾಗವಹಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಬಿಗಿ ಭದ್ರತೆ ಒದಗಿಸಲಾಗುವುದು. ಸಿಸಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುತ್ತದೆ. ಕೋಲಾಟದಲ್ಲಿ ಭಾಗವಹಿಸುವವರಿಗೆ ಉಚಿತ ಕೋಲುಗಳನ್ನು ವಿತರಿಸಲಾಗುವುದು. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

₹380 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ: ಗಿಣಿಗೇರಿ ಮತ್ತು ಅಳವಂಡಿ ಮಾರ್ಗವಾಗಿ ಮುಂಡರಗಿ ವರೆಗೆ ದ್ವಿಪಥ ನಿರ್ಮಿಸಲು ₹380 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ. ಯೋಜನೆಗೆ ಸಚಿವ ಸಂಪುಟದ ಅನುಮೋದನೆ ದೊರೆಯಬೇಕಿದೆ. ಭೂಸ್ವಾಧೀನಕ್ಕಾಗಿ ₹90 ಕೋಟಿ ಪ್ರತ್ಯೇಕವಾಗಿ ಮೀಸಲಿಡುವ ಉದ್ದೇಶವಿದೆ. ರಾಷ್ಟ್ರೀಯ ಹೆದ್ದಾರಿ ಗುಣಮಟ್ಟದಲ್ಲಿ ಸಿಮೆಂಟ್ ರಸ್ತೆ ನಿರ್ಮಿಸಲಾಗುವುದು ಎಂದು ಸಂಸದರು ತಿಳಿಸಿದರು.

ರೈಲ್ವೆ ಸೇತುವೆ ರಸ್ತೆ ಕಾಮಗಾರಿ ಚುರುಕು: ನಗರದ ಸ್ವಾಮಿ ವಿವೇಕಾನಂದ ರಸ್ತೆಯಲ್ಲಿರುವ ರೈಲ್ವೆ ಸೇತುವೆ ಬಳಿ ರಸ್ತೆ ನಿರ್ಮಾಣ ವಿಳಂಬವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ, ಅ. 16ರಂದು ಸಂಚಾರಕ್ಕೆ ಅನುಕೂಲವಾಗುವಂತೆ ತುರ್ತು ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಕಿನ್ನಾಳ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ವರ್ಕ್ ಆರ್ಡರ್ ನೀಡಿಲ್ಲ. ಪ್ರಸ್ತುತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಸದ್ಯಕ್ಕೆ ರಸ್ತೆಯಲ್ಲಿನ ಗುಂಡಿಗಳನ್ನು ಎರಡು ದಿನಗಳಲ್ಲಿ ಮುಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕ್ರೀಡಾಂಗಣ ಅಭಿವೃದ್ಧಿಗೆ ₹25 ಕೋಟಿ ಅಗತ್ಯ: ತಾಲೂಕು ಕ್ರೀಡಾಂಗಣ ದುರ್ಬಳಕೆಯಾಗುತ್ತಿದೆ ಎಂಬ ಆರೋಪ ಸರಿಯಲ್ಲ. ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುವುದರಿಂದ ಕ್ರೀಡಾಸಕ್ತರಿಗೆ ಅವಕಾಶ ದೊರೆಯುತ್ತದೆ ಎಂದು ರಾಜಶೇಖರ ಹಿಟ್ನಾಳ ಹೇಳಿದರು.

ಜಿಲ್ಲಾ ಕ್ರೀಡಾಂಗಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸುಮಾರು ₹25 ಕೋಟಿ ಅಗತ್ಯವಿದೆ. ಆದರೆ, ಅಷ್ಟು ದೊಡ್ಡ ಮೊತ್ತದ ಅನುದಾನ ಲಭ್ಯವಿಲ್ಲ ಎಂದು ತಿಳಿಸಿದರು.

ಉದ್ಯಮಿ ಶ್ರೀನಿವಾಸ ಗುಪ್ತಾ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಗಮಾಸ್ತಿ ಕ್ಷೇತ್ರದ ಮಹಿಳಾ ದಸರಾ ಜಿಲ್ಲೆಗೆ ಮಾದರಿ
ಅಗ್ನಿವೀರರಾಗಲು ಇಟಗಿಯಲ್ಲಿ ಉಚಿತ ತರಬೇತಿ ಶಿಬಿರ