ಬಿ. ಶೇಖರ್ ಗೋಪಿನಾಥಂ
ಸಾಂಸ್ಕೃತಿಕ ನಗರಿ ಮೈಸೂರು ಎಂಬ ಹೆಸರಿಗೆ ತಕ್ಕಂತೆ ದಸರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಗೀತ, ನೃತ್ಯ, ನಾಟಕ ಮತ್ತು ಕಲಾಸಕ್ತರಿಗೆ ರಸದೌತಣ ನೀಡಿತು.
ವಿಶ್ವವಿಖ್ಯಾತ ಮೈಸೂರು ಅರಮನೆ ಮುಂಭಾಗದ ವೇದಿಕೆ ಸೇರಿದಂತೆ 9 ಕಡೆ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯತೆಯಿಂದ ಕೂಡಿವೆ. ಮಂಗಳವಾರ ಸಹ ವೈಭವಯುತ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ವೇದಿಕೆಗಳಲ್ಲಿ ಜರುಗಿತು.ಅರಮನೆಯಂಗಳಲ್ಲಿ ಸಂಗೀತ
ಭಾರತೀಯ ವಿದ್ಯಾಭವನದ ಎಸ್.ಆರ್. ರವಿಕುಮಾರ್ ನೇತೃತ್ವದ ನೃತ್ಯರೂಪಕ, ಕಲಬುರಗಿಯ ರವಿರಾಜ್ ಎಸ್. ಹಾಸು ತಂಡದ ವಚನ ದಾಸ ತತ್ವ ವೈಭವ, ಸ್ಮಿತಾ ಶ್ರೀಪತಿ ತಂಡದ ಭರತನಾಟ್ಯ, ಡಾ. ಶ್ವೇತಾ ಮಡಪ್ಪಾಡಿ ತಂಡದ ಕನ್ನಡ ಕಾಜಾಣ ಹಾಡು ಪಾಡು, ಅಭಿಷೇಕ್ ರಘುರಾಮ್ ತಂಡದ ಕರ್ನಾಟಕ ಶಾಸ್ತ್ರೀಯ ಸಂಗೀತವು ಅರಮನೆ ಆವರಣವನ್ನು ಸಂಗೀತಮಯಗೊಳಿಸಿತು.
ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಅಂಕುಶ್ ಸುರೇಶ್ ಕಡಬ ಅವರಿಂದ ಕರ್ನಾಟಕ ಶಾಸ್ತ್ರೀಯ ಕೊಳಲುವಾದನ, ಶ್ರದ್ಧಾ ವಿ. ಶಾಖಂಡಕಿ ತಂಡದ ಸುಗಮ ಸಂಗೀತ, ಶಾಂತಲ ವಟ್ಟಂ ತಂಡದಿಂದ ಕಥಕ್ ಶಾಸ್ತ್ರೀಯ ನೃತ್ಯ, ರಜತ್ ಶರ್ಮಾ ತಂಡ ದಾಸವಾಣಿ ಹಾಗೂ ರಂಜಿನಿ ಕಲಾತಂಡ ಪ್ರಸ್ತುತಪಡಿಸಿದ ಮಹಿಷ ಮರ್ದಿನಿ ಯಕ್ಷಗಾನವು ಗಮನ ಸೆಳೆಯಿತು.
ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಚಿಟ್ಟಿಮೇಳ, ಜಾನಪದ ಗೀತೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ವೀಣಾ ವಾದನ, ಭರತನಾಟ್ಯ, ಸುಗಮ ಸಂಗೀತ ಜರುಗಿತು.
ಇನ್ನೂ ಚಿಕ್ಕಗಡಿಯಾರ ವೃತ್ತದಲ್ಲಿರುವ ವೇದಿಕೆಯಲ್ಲಿ ಗಾರುಡಿಗೊಂಬೆ, ತಮಟೆ ವಾದನ, ಭಜನೆ, ತತ್ವಪದ ಗಾಯನ, ಜಾನಪದ ಗಾಯನವು ದೇವರಾಜ ಮಾರುಕಟ್ಟೆ ಕಡೆಗೆ ಬಂದವರಿಗೆ ಕೇಳಿಸಿತು.
ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸುಗಮ ಸಂಗೀತ, ಇರುಳು ಹಗಲಾಗುವುದೊಳಗೆ ನಾಟಕ ಹಾಗೂ ವಾರ್ಡ್ ನಂ.6 ನಾಟಕ ಪ್ರದರ್ಶನಗೊಂಡವು.
ಇದು ಮಾತ್ರವಲ್ಲದೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.