ಕನ್ನಡಪ್ರಭ ವಾರ್ತೆ ಮೈಸೂರುದಸರಾ ಮಹೋತ್ಸವ ಅಂಗವಾಗಿ ನಡೆಯುವ ಚಲನಚಿತ್ರೋತ್ಸವವನ್ನು ಕೈ ಬಿಡಬಾರದು. ಕೈಮುಗಿದು ಕೇಳಿಕೊಳ್ಳುತ್ತೇನೆ, ಚಲನಚಿತ್ರೋತ್ಸವ ನಡೆಸಿ. ಎರಡು ಚಿತ್ರಮಂದಿರಗಳಲ್ಲಿ ನಡೆಸಿದರೂ ಸಾಕು ಎಂದು ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮನವಿ ಮಾಡಿದರು.ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದಸರಾ ನಾಡಿನ ಪರಂಪರೆ ಬಿಂಬಿಸುತ್ತದೆ. ಆದರೆ ಸರ್ಕಾರ ದಸರಾ ಚಲನಚಿತ್ರೋತ್ಸವವನ್ನು ಯಾವುದೇ ಕಾರಣಕ್ಕೂ ರದ್ದುಪಡಿಸಬಾರದು. ತನ್ನ ಈ ನಿರ್ಧಾರ ಮರುಪರಿಶೀಲಿಸದಿದ್ದರೆ ಮುಂದಿನ ಹಂತದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ಚಲನಚಿತ್ರೋತ್ಸವವನ್ನು ವೆಚ್ಚದ ಲೆಕ್ಕಾಚಾರದಲ್ಲಿ ನೋಡುವುದು ದಸರಾ ಮಹೋತ್ಸವದ ಆಶಯವನ್ನೇ ಅವಮಾನಿಸಿದಂತೆ. ದಸರಾ ಮಹೋತ್ಸವದಲ್ಲಿ ಸಂಸ್ಕೃತಿ ಬಿಂಬಿಸುವ ಚಲನಚಿತ್ರೋತ್ಸವ ನಡೆಯಬೇಕು. ಎಲ್ಲಾ ಚಟುವಟಿಕೆಗಳಲ್ಲೂ ಲಾಭ-ನಷ್ಟದ ಲೆಕ್ಕ ಹಾಕದ ಸರ್ಕಾರ, ಚಲನಚಿತ್ರೋತ್ಸವ ವಿಚಾರದಲ್ಲಿ ಏಕೆ ಈ ಲೆಕ್ಕಾಚಾರ? ಎಂದು ಅವರು ಪ್ರಶ್ನಿಸಿದರು.ಎರಡು ಚಿತ್ರಮಂದಿರದಲ್ಲಿ ನಡೆಸಿದರೂ ಸಾಕು. ಅದಕ್ಕೆ ಬೇಕಾದ ಸಂಪನ್ಮೂಲ ನಾವು ಕೊಡುತ್ತೇವೆ. ಸದಾಭಿರುಚಿಯ ಚಲನಚಿತ್ರಗಳನ್ನು ಪ್ರದರ್ಶನಗೊಳಿಸಿ ಜನರು ಯಾಕೆ ಬರುವುದಿಲ್ಲ ಎಂಬುದನ್ನು ನಾನು ನೋಡುತ್ತೇನೆ ಎಂದು ಸವಾಲು ಹಾಕಿದರು.ಉತ್ತಮ ಸಿನಿಮಾಗಳನ್ನು ಆಯ್ಕೆ ಮಾಡಿ ಪ್ರದರ್ಶಿಸಿದರೆ ಪ್ರೇಕ್ಷಕರು ಖಂಡಿತವಾಗಿಯೂ ಬರುತ್ತಾರೆ. ಚಲನಚಿತ್ರೋತ್ಸವ ಸಮಿತಿಯನ್ನು ದಸರಾ ಮಹೋತ್ಸವದ ಒಂದೆರಡು ದಿನಗಳ ಕಾರ್ಯಕ್ರಮದಂತೆ ಪರಿಗಣಿಸುವುದರಿಂದ ಉತ್ತಮ ಸಿನಿಮಾ ಪ್ರದರ್ಶನ ಸಾಧ್ಯವಾಗುತ್ತಿಲ್ಲ ಎಂದರು.ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ. ಪ್ರೇಮಕುವಾರ್ ಮಾತನಾಡಿ, ಚಲನಚಿತ್ರೋತ್ಸವ ರದ್ದುಪಡಿಸುವುದಕ್ಕಿಂತ ನಟ- ನಟಿಯರನ್ನು ಕರೆತಂದು ನಡೆಸುವ ಕಾರ್ಯಕ್ರಮ ರದ್ದುಪಡಿಸಲಿ. ಚಲನಚಿತ್ರೋತ್ಸವ ದಸರಾ ಮಹೋತ್ಸವದ ಅವಿಭಾಜ್ಯ ಅಂಗ. ಅದನ್ನೇ ರದ್ದುಪಡಿಸುವುದು ಮೂರ್ಖತನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರುನಾಡ ರಕ್ಷಣಾ ವೇದಿಕೆ ಕಾರ್ಯದರ್ಶಿ ಸತೀಶ್ ಹೆಗ್ಗೂರು, ಕನ್ನಡ ಪರ ಹೋರಾಟ ಮೋಹನ್ ಕುಮಾರ್ ಗೌಡ ಮಾತನಾಡಿದರು.ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಮೂಗೂರು ನಂಜುಂಡಸ್ವಾಮಿ, ಪ್ರಕಾಶ್‌ಬಾಬು, ಡಾ. ವಸಂತಕುಮಾರ್ ತಿಮಕಾಪುರ ಇದ್ದರು.---ಕೋಟ್ಚಿತ್ರನಗರ ನಿರ್ಮಾಣದ ಜವಾಬ್ದಾರಿಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡಬಾರದು. ಈ ಬಗ್ಗೆ ಚಿತ್ರರಂಗದ ಹಿರಿಯರ ಸಲಹೆ ಪರಿಗಣಿಸಬೇಕು. ಖಾಸಗಿ ಅವರಿಗೆ ನೀಡಿದರೆ ಚಿತ್ರನಗರ ನಿರ್ಮಾಣವಾಗುವುದಿಲ್ಲ. ನ. 14ರಂದು ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳ ಚಿತ್ರೋತ್ಸವವನ್ನು ಸರ್ಕಾರ ಆಯೋಜಿಸಲಿ.- ರಾಜೇಂದ್ರ ಸಿಂಗ್‌ಬಾಬು, ಹಿರಿಯ ನಿರ್ದೇಶಕ.