ಅರಸೀಕೆರೆ: ನಗರದ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೌರ ಕಾರ್ಮಿಕರ ಕಲ್ಯಾಣಕ್ಕೆ ನಗರಸಭೆ ಮತ್ತೊಂದು ಹೆಜ್ಜೆ ಇಟ್ಟಿದೆ. ಕಾರ್ಮಿಕರ ವಿಶ್ರಾಂತಿ ಹಾಗೂ ದೈನಂದಿನ ಅನುಕೂಲಗಳನ್ನು ಗಮನದಲ್ಲಿಟ್ಟುಕೊಂಡು, ನಗರಸಭೆ ಪಕ್ಕದ ಪಂಪ್‌ಹೌಸ್ ಸಮೀಪ 15ನೇ ಹಣಕಾಸು ಯೋಜನೆಯಡಿ ಸುಮಾರು ₹ 33 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವಿಶ್ರಾಂತಿ ಗೃಹವನ್ನು ಅಬಕಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಉದ್ಘಾಟಿಸಿದರು.ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಶಿವಲಿಂಗೇಗೌಡ, ನಗರದ ಸ್ವಚ್ಛತೆಯನ್ನು ಕಾಪಾಡಲು ಪೌರ ಕಾರ್ಮಿಕರು ಬೆಳಗಿನ ಜಾವದಿಂದಲೇ ಶ್ರಮಿಸುತ್ತಾರೆ. ಅವರ ಸೇವೆ ಮತ್ತು ಪರಿಶ್ರಮಕ್ಕೆ ಗೌರವ ನೀಡುವುದರ ಜೊತೆಗೆ, ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು. ಇದೇ ವೇಳೆ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತು ಮಹತ್ವದ ಭರವಸೆ ನೀಡಿದ ಅವರು, ನಗರದ ಸಮೀಪ ಸುಮಾರು ಐದು ಎಕರೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ. ಈ ಜಾಗದಲ್ಲಿ ಪೌರ ಕಾರ್ಮಿಕರಿಗೆ ನಿವೇಶನಗಳನ್ನು ಒದಗಿಸಿದ ಬಳಿಕ ಗುಂಪು ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶವಿದೆ ಎಂದು ತಿಳಿಸಿದರು. ದಸರಾ ಹಬ್ಬದ ಸಂದರ್ಭದಲ್ಲಿ ಕಾರ್ಮಿಕರಿಗೆ ಈ ಶುಭ ಸುದ್ದಿ ನೀಡಿದರು.ವಿಶ್ರಾಂತಿ, ಊಟ ಮತ್ತು ಶೌಚಾಲಯದ ವ್ಯವಸ್ಥೆ:ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ಪೌರ ಕಾರ್ಮಿಕರು ಪ್ರತಿದಿನ ಬೆಳಗಿನ ಜಾವ 4 ಗಂಟೆಯಿಂದಲೇ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಅವರ ಅನುಕೂಲಕ್ಕಾಗಿ ನೂತನ ವಿಶ್ರಾಂತಿ ಗೃಹದಲ್ಲಿ ವಿಶ್ರಾಂತಿ ಕೊಠಡಿ, ಊಟದ ವ್ಯವಸ್ಥೆ ಹಾಗೂ ಶೌಚಾಲಯದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಎ.ಸಿ. ಗಂಗಣ್ಣ, ತಹಸೀಲ್ದಾರ್ ಸಂತೋಷ್ ಕುಮಾರ್, ಎಂಜಿನಿಯರ್ ಸುನಿಲ್ ಕುಮಾರ್, ಆರೋಗ್ಯ ನಿರೀಕ್ಷಕ ಲಿಂಗರಾಜು, ರೇವಣಸಿದ್ದಪ್ಪ ಸೇರಿದಂತೆ ನಗರಸಭೆಯ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.