ದಸರಾ: ಚನ್ನಗಿರಿಯಲ್ಲಿ ವಿಜೃಂಭಣೆಯ ಅಂಬಿನೋತ್ಸವ

KannadaprabhaNewsNetwork |  
Published : Oct 22, 2026, 01:45 AM IST
ಅಂಬಿನ ಕಂಬಕ್ಕೆ ಪೂಜೆ ಯನ್ನು ಸಲ್ಲಿಸುತ್ತೀರುವ ತಹಶೀಲ್ದಾರ್ ಎನ್.ಜೆ.ನಾಗರಾಜ್, ನಾಡಿಗರ ಮನೆತನದ ಮಧುಕೇಶ್ ಇದ್ದಾರೆ | Kannada Prabha

ಸಾರಾಂಶ

ಚನ್ನಗಿರಿ ತಾಲೂಕಿನಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬವನ್ನು ಮಂಗಳವಾರ ಮತ್ತು ಬುಧವಾರ ಸಡಗರ-ಸಂಭ್ರಮಗಳಿಂದ ಆಚರಣೆ ಮಾಡಲಾಯಿತು.

- ಪೂಜೆ ಬಳಿಕ ಅಂಬಿನ ಕಂಬಕ್ಕೆ ಬಿಲ್ಲು ಚುಚ್ಚಿದ ತಹಸೀಲ್ದಾರ್‌ । ಕಂಬ ಛೇದಿಸಿದ ಮಧುಕೇಶ್

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನಾದ್ಯಂತ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬವನ್ನು ಮಂಗಳವಾರ ಮತ್ತು ಬುಧವಾರ ಸಡಗರ-ಸಂಭ್ರಮಗಳಿಂದ ಆಚರಣೆ ಮಾಡಲಾಯಿತು.

ಮಂಗಳವಾರ ಮನೆಗಳಲ್ಲಿ, ಗ್ಯಾರೇಜ್ ಅಂಗಡಿಗಳಲ್ಲಿ ಇರುವಂತಹ ಯಂತ್ರಗಳಿಗೆ ಮತ್ತು ವಿದ್ಯುತ್ ಚಾಲಿತ ಮಿಷನ್‌ಗಳಿಗೆ, ಎಲ್ಲ ರೀತಿಯ ವಾಹನಗಳಿಗೆ, ಆಯುಧಗಳಿಗೆ ಹೂವಿನ ಅಲಂಕಾರಗಳೊಂದಿಗೆ ಪೂಜೆ ಸಲ್ಲಿಸಲಾಯಿತು.

ಬುಧುವಾರ ಪಟ್ಟಣದ ಎಲ್ಲ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ದೇವರುಗಳ ಪೂಜಿಸಿ ನಂತರ ಸಂಜೆ ಪಟ್ಟಣದ ಹೊರವಲಯದಲ್ಲಿರುವ ಮೌದ್ಗಲ್ ಆಂಜನೇಯ ಸ್ವಾಮಿ ದೇವಾಲಯ ಬಳಿ ಇರುವ ಬನ್ನಿ ಮಂಟಪದಲ್ಲಿ ಒಂದೇ ಕಡೆ ಸೇರಿ ಅಂಬಿನೋತ್ಸವ ನಡೆಸಲಾಯಿತು.

ಪಟ್ಟಣದಲ್ಲಿರುವ ಶ್ರೀ ಗುಳ್ಳಮ್ಮದೇವಿ, ಶ್ರೀ ಬನಶಂಕರಿ ದೇವಿ, ಶ್ರೀ ಕುಕ್ಕುವಾಡೇಶ್ವರಿ, ಶ್ರೀ ಅಂತರಘಟ್ಟಮ್ಮ ದೇವಿ, ಶ್ರೀ ದುರ್ಗಾಂಬದೇವಿ, ಶ್ರೀ ರಂಗನಾಥ ಸ್ವಾಮಿ, ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿ, ಶ್ರೀ ಬಸವೇಶ್ವರ ಸ್ವಾಮಿ, ಪಿಳ್ಳಮ್ಮದೇವಿ, ಶ್ರೀ ಮೈಲಾರಲಿಂಗೇಶ್ವರ ದೇವರ ಉತ್ಸವ ಮೂರ್ತಿಗಳು ಬನ್ನಿ ಮಂಟಪದ ಬಳಿ ಆಗಮಿಸಿದವು. ಚನ್ನಗಿರಿ ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರು ಅಂಬಿನೋತ್ಸವದಲ್ಲಿ ಭಾಗವಹಿಸಿ ದೇವರುಗಳ ದರ್ಶನ ಪಡೆದರು.

ಸಂಪ್ರದಾಯದಂತೆ ತಾಲೂಕಿನ ಶಕ್ತಿ ಸ್ಥಳವೆಂದೇ ಪ್ರಸಿದ್ಧಿ ಪಡೆದ ಅಮ್ಮನ ಗುಡ್ಡದ ಶ್ರೀ ಕುಕ್ಕುವಾಡೇಶ್ವರಿ ದೇವಿಯ ಅಂಬಿನೋತ್ಸವವನ್ನು ತಹಸೀಲ್ದಾರ್ ಎನ್.ಜೆ.ನಾಗರಾಜ್ ಸಂಪನ್ನಗೊಳಿಸಿದರು. ಅನಂತರ ಕೋಟೆಯಲ್ಲಿರುವ ಶ್ರೀ ಭೇಟೆ ರಂಗನಾಥ ಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ಶ್ವೇತವರ್ಣದ ಉಡುಪು, ಜರೀಪೇಟ ತೊಟ್ಟು ಬನ್ನಿ ಮಂಟಪದ ಬಳಿ ಇರುವ ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಬನ್ನಿ ಮಂಟಪದ ಬಳಿ ಬಂದು ಪಟ್ಟಣದ ಎಲ್ಲ ದೇವರುಗಳಿಗೂ ಪೂಜೆ ಸಲ್ಲಿಸಿ, ಅಂಬಿನ ಕಂಬಕ್ಕೆ ಪೂಜೆ ಸಲ್ಲಿಸಿ ಬಿಲ್ಲಿನಿಂದ ಅಂಬಿನ ಕಂಬಕ್ಕೆ ಚುಚ್ಚಿದರು. ಈ ವೇಳೆ ನಾಡಿಗರ ಮನೆತನದ ಮಧುಕೇಶ್ ಅಂಬಿನ ಕಂಬವನ್ನು ಛೇದಿಸುವ ಆಚರಣೆ ಮೂಲಕ ಅಂಬಿನೋತ್ಸವ ನಡೆಸಲಾಯಿತು. ಅಂಬಿನೋತ್ಸವಕ್ಕೆ ಬಂದಿದ್ದ ಭಕ್ತರು ಪರಸ್ಪರರಿಗೆ ಬನ್ನಿಪತ್ರೆಯನ್ನು ನೀಡಿ, ಶುಭಾಶಯ ವಿನಿಮಯ ಮಾಡಿಕೊಂಡರು.

- - -

-21ಕೆಸಿಎನ್ಜಿ1: ತಹಸೀಲ್ದಾರ್ ಎನ್.ಜೆ.ನಾಗರಾಜ್‌ ಅಂಬಿನ ಕಂಬಕ್ಕೆ ಪೂಜೆ ಸಲ್ಲಿಸಿದರು. ಈ ವೇಳೇ ನಾಡಿಗರ ಮನೆತನದ ಮಧುಕೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರ್ಷೋಧ್ಘಾರದೊಂದಿಗೆ ನಡೆದ ಅಶ್ವವಾಹನೋತ್ಸವದ ಜಂಬೂಸವಾರಿ
ಅ.23ರಂದು ಗಣಂಗೂರು ಟೋಲ್‍ ಬಂದ್: ರೈತ ಸಂಘ ತೀರ್ಮಾನ