ದಸರಾ ರಜೆಗೆ ಕೆಲ ಖಾಸಗಿ ಶಾಲೆಗಳಿಂದ ಕುತ್ತು

KannadaprabhaNewsNetwork |  
Published : Oct 19, 2026, 02:15 AM IST
16ಎಚ್ಎಸ್ಎನ್13 :  | Kannada Prabha

ಸಾರಾಂಶ

ಇಲಾಖೆಯ ವತಿಯಿಂದ 19 ದಿನಗಳ ದಸರಾ ರಜೆಯನ್ನು ನೀಡಲಾಗಿತ್ತು. ಆದರೆ ಹೆಚ್ಚಿನ ಖಾಸಗಿ ಶಾಲೆಗಳು ಅಂದಿನಿಂದ ರಜೆ ನೀಡದೆ ಶಾಲೆಗಳನ್ನು ಮುಂದುವರಿಸಿ 10ನೇ ತಾರೀಖಿನವರೆಗೂ ಶಾಲೆಗಳನ್ನು ನಡೆಸಿದ್ದರೆ, ಇನ್ನೂ ಕೆಲವು ಶಾಲೆಯವರು ಈಗಲೂ ಶಾಲೆ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಸರಾ ರಜೆಯಲ್ಲಿ ಮಕ್ಕಳ ಮೇಲೆ ಶೈಕ್ಷಣಿಕ ಒತ್ತಡ ಹೇರುತ್ತಿರುವ ಖಾಸಗಿ ಶಾಲೆಗಳ ಧೋರಣೆಯನ್ನು ಕಂಡು ಸಹ ಕಾಣದಂತಿರುವ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಆಲೂರು

ನಾಡಹಬ್ಬ ದಸರಾ ಮಹೋತ್ಸವದಂತಹ ಸಾಂಪ್ರದಾಯಿಕ ರಜೆಗಳ ಸಮಯದಲ್ಲಿ ಕೆಲವು ಖಾಸಗಿ ಶಾಲೆಗಳು, ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಶಾಲೆಗಳನ್ನು ನಡೆಸುತ್ತಿದ್ದು, ಇಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ದಸರಾ ಮಹೋತ್ಸವದ ನಿಮಿತ್ತ ಪ್ರತಿವರ್ಷದಂತೆ ಈ ವರ್ಷವೂ ಅಕ್ಟೋಬರ್‌ 3ನೇ ತಾರೀಖಿನಿಂದ 21ನೇ ತಾರೀಖಿನವರೆಗೆ ರಜೆ ಘೋಷಣೆ ಮಾಡಲಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಮಕ್ಕಳು ರಜೆಯ ಮಜಾ ಅನುಭವಿಸುತ್ತಿದ್ದರೆ, ಕೆಲ ಖಾಸಗಿ ಶಾಲೆಯವರ ಒತ್ತಡದಿಂದಾಗಿ ಆ ಶಾಲೆಯ ಮಕ್ಕಳು ಸಜೆ ಅನುಭವಿಸುವಂಥಾಗಿದೆ. ಸರ್ಕಾರಿ ಶಾಲೆಯ ಮಕ್ಕಳು ರಜೆಯಲ್ಲಿ ಆಟವಾಡುತ್ತಾ ಇತರ ಚಟುವಟಿಕೆಗಳಲ್ಲಿ ತೊಡಗಿರುವುದನ್ನು ಕಂಡು ಆ ಮಕ್ಕಳು ಬೇಸರದಿಂದಲೇ ಶಾಲೆಗೆ ಹೋಗುವಂತಾಗಿದೆ. ಅರ್ಧವಾರ್ಷಿಕ ಪರೀಕ್ಷೆಗಳು ಮುಗಿದ ನಂತರ ನಾಡಹಬ್ಬ ದಸರಾವನ್ನು ಮಕ್ಕಳು ಹಾಗೂ ಕುಟುಂಬದೊಂದಿಗೆ ಆಚರಿಸಲು ಹಾಗೂ ವಿಶ್ರಾಂತಿ ಪಡೆಯಲಿ ಎಂಬ ಉದ್ದೇಶದಿಂದ, ಇಲಾಖೆಯ ವತಿಯಿಂದ 19 ದಿನಗಳ ದಸರಾ ರಜೆಯನ್ನು ನೀಡಲಾಗಿತ್ತು. ಆದರೆ ಹೆಚ್ಚಿನ ಖಾಸಗಿ ಶಾಲೆಗಳು ಅಂದಿನಿಂದ ರಜೆ ನೀಡದೆ ಶಾಲೆಗಳನ್ನು ಮುಂದುವರಿಸಿ 10ನೇ ತಾರೀಖಿನವರೆಗೂ ಶಾಲೆಗಳನ್ನು ನಡೆಸಿದ್ದರೆ, ಇನ್ನೂ ಕೆಲವು ಶಾಲೆಯವರು ಈಗಲೂ ಶಾಲೆ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಸರಾ ರಜೆಯಲ್ಲಿ ಮಕ್ಕಳ ಮೇಲೆ ಶೈಕ್ಷಣಿಕ ಒತ್ತಡ ಹೇರುತ್ತಿರುವ ಖಾಸಗಿ ಶಾಲೆಗಳ ಧೋರಣೆಯನ್ನು ಕಂಡು ಸಹ ಕಾಣದಂತಿರುವ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.

ಈ ಸಂಬಂಧವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ಡಿಡಿಪಿಐ ಬಲರಾಮ್, ಕೆಲವು ಖಾಸಗಿ ಶಾಲೆಯವರು ಕ್ರಿಸ್ಮಸ್ ರಜೆಗೆ ಹೊಂದಾಣಿಕೆ ಮಾಡಿಕೊಳ್ಳಲು ಅನುಮತಿ ಪಡೆದು ಕೆಲವು ದಿನ ಶಾಲೆ ನಡೆಸಿ ಈಗ ರಜೆ ನೀಡಿದ್ದಾರೆ. ಈಗಾಗಲೇ ದಸರಾ ರಜೆ ಸಂದರ್ಭದಲ್ಲಿ ನಡೆಸದಂತೆ ಸುತ್ತೋಲೆ ಹೊರಡಿಸಿದ್ದು, ಇದನ್ನು ಮೀರಿ ಶಾಲೆ ನಡೆಸುತ್ತಿರುವ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಬಿಇಓಗಳಿಗೆ ಮತ್ತೊಮ್ಮೆ ಸೂಚಿಸಲಾಗುವುದೆಂದು ತಿಳಿಸಿದರು. ಹಾಸನ ಜಿಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಶಿವರಾಮೇಗೌಡ ಮಾತನಾಡಿ, ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಲೇಬೇಕು. ಸರ್ಕಾರದ ಆದೇಶಗಳನ್ನು ಪಾಲಿಸದೆ ರಜೆ ನೀಡದೆ ಶಾಲೆ ನಡೆಸುವುದು ತಪ್ಪು ಇಂಥವರ ವಿರುದ್ಧ ಇಲಾಖೆಯ ನಿಮಾನುಸಾರ ಏನು ಕ್ರಮ ಕೈಗೊಳ್ಳಬೇಕೋ ಕೈಗೊಳ್ಳಲಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ
ರೈತನ ಬೇಡಿಕೆ ಈಡೇರುವವರೆಗೂ ಮಠಾಧೀಶರ ಬೆಂಬಲ ಇರುತ್ತದೆ-ಸ್ವಾಮೀಜಿ