ಇಂದಿನಿಂದ ದಸರಾ ಜನೋತ್ಸವ: ಕರಗೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : Oct 11, 2026, 03:45 AM IST
 ಚಾಲನೆ | Kannada Prabha

ಸಾರಾಂಶ

ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಮಡಿಕೇರಿ ದಸರಾ ಕರಗ ಉತ್ಸವವು ಭಾನುವಾರ ಆರಂಭವಾಗಲಿದ್ದು, ಅ.21 ವಿಜಯದಶಮಿ ಶೋಭಾಯಾತ್ರೆಯೊಂದಿಗೆ ಮುಕ್ತಾಯಗೊಳ್ಳಲಿದೆ. ನಾಲ್ಕು ಶಕ್ತಿ ದೇವತೆಗಳಾದ ಕುಂದೂರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ, ಕೋಟೆ ಮಾರಿಯಮ್ಮ ದೇವರ ಕರಗಗಳು ನಗರ ಸಂಚಾರ ನಡೆಸುತ್ತವೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಮಡಿಕೇರಿ ದಸರಾ ಕರಗ ಉತ್ಸವವು ಭಾನುವಾರ ಆರಂಭವಾಗಲಿದ್ದು, ಅ.21 ವಿಜಯದಶಮಿ ಶೋಭಾಯಾತ್ರೆಯೊಂದಿಗೆ ಮುಕ್ತಾಯಗೊಳ್ಳಲಿದೆ. ನಾಲ್ಕು ಶಕ್ತಿ ದೇವತೆಗಳಾದ ಕುಂದೂರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ, ಕೋಟೆ ಮಾರಿಯಮ್ಮ ದೇವರ ಕರಗಗಳು ನಗರ ಸಂಚಾರ ನಡೆಸುತ್ತವೆ.

ನೂರಾರು ವರ್ಷಗಳ ಹಿಂದೆ ಕೊಡಗಿನ ಮಡಿಕೇರಿ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಕ್ತಿ ದೇವತೆಗಳ ಕರಗಗಳನ್ನು ಅಲಂಕರಿಸಿ ನಗರ ಪ್ರದಕ್ಷಿಣೆ ಮಾಡಿಸಿದರು. ಪವಾಡವೆಂಬಂತೆ ಸಾಂಕ್ರಾಮಿಕ ರೋಗಗಳಿಂದ ನಗರ ಮುಕ್ತವಾಯಿತು.

ಈ ಸಂಪ್ರದಾಯವನ್ನು ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಮಹಾಯುದ್ಧಗಳ ಸಮಯದಲ್ಲಿಯೂ ಮಡಿಕೇರಿ ದಸರಾ ಕರಗ ಹೊರಡಿಸುವುದನ್ನು ಮಾತ್ರ ನಿಲ್ಲಿಸಲಿಲ್ಲ. ಮಹಾಲಯ ಅಮಾವಾಸ್ಯೆ ಮರುದಿನ ಸಾಂಪ್ರದಾಯಿಕ ಕರಗ ಪೂಜೆಯೊಂದಿಗೆ ಮಡಿಕೇರಿ ದಸರಾಕ್ಕೆ ವಿದ್ಯುಕ್ತ ಚಾಲನೆ ದೊರೆಯುತ್ತದೆ.

ಅಂದು ನಾಲ್ಕು ಕರಗಗಳು ಪೇಟೆ ಶ್ರೀ ರಾಮ ಮಂದಿರ ದೇಗುಲಕ್ಕೆ ಬಂದು ಪೂಜೆ ಸಲ್ಲಿಸುತ್ತದೆ. ಇದಕ್ಕೂ ಒಂದು ಪೌರಾಣಿಕ ಹಿನ್ನಲೆ ಇದೆ. ಶಕ್ತಿ ಮಾತೆ ಎಂದರೆ (ಪಾರ್ವತಿ) ದುಷ್ಟ ಸಂಹಾರಕ್ಕೆ ಹೊರಡುವ ಮೊದಲು ದೇವಾನುದೇವತೆಗಳಿಂದ ವಿವಿಧ ಆಯುಧಗಳನ್ನು ಪಡೆದುಕೊಳ್ಳುತ್ತಾಳೆ. ಆ ಸಮಯದಲ್ಲಿ ದೇವಿ ಮೊದಲು ಹೋಗುವುದು ತನ್ನ ಅಣ್ಣನಾದ ವಿಷ್ಣುವಿನಲ್ಲಿಗೆ. ಈ ಹಿನ್ನಲೆಯಲ್ಲಿ ದೇವತೆಗಳು ನವರಾತ್ರಿ ಸಂದರ್ಭ ಕರಗಗಳು ಐದು ದಿನಗಳ ಕಾಲ ನಗರ ಸಂಚಾರ ಮಾಡುತ್ತವೆ. ಕೊನೆಗೆ ವಿಜಯದಶಮಿಯಂದು ದಶಮಂಟಪಗಳ ಜೊತೆಗೂಡಿ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿದು ನವರಾತ್ರಿ ದಸರಾ ಮಹೋತ್ಸವವು ಸಂಪನ್ನಗೊಳ್ಳುತ್ತದೆ.

ನಾಳೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು :

ಅ. 12 ರಂದು ಸಂಜೆ 6.30ಕ್ಕೆ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. 13 ರಂದು ಬೆಳಗ್ಗೆ ಕಾಫಿ ದಸರಾ ಉದ್ಘಾಟನೆ ನಡೆಯಲಿದ್ದು, ಸಂಜೆ 4 ಗಂಟೆಗೆ ಗಾಂಧಿ ಮೈದಾನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ.

14 ರಂದು ಬೆಳಗ್ಗೆ 10 ಗಂಟೆಗೆ ಕಾಫಿ ದಸರಾ ಮೇಳ ಆರಂಭವಾಗಲಿದ್ದು, ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 15 ರಂದು ಬೆಳಗ್ಗೆ 10 ಗಂಟೆಗೆ ಕವಿಗೋಷ್ಠಿ ಹಾಗೂ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 16 ರಂದು ಬೆಳಗ್ಗೆ 9 ಗಂಟೆಗೆ ಮಕ್ಕಳ ದಸರಾ ಸ್ಪರ್ಧೆಗಳು ಹಾಗೂ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.17 ರಂದು ಬೆಳಗ್ಗೆ 10 ಗಂಟೆಗೆ ಶ್ವಾನ ಪ್ರದರ್ಶನ (ಡಾಗ್ ಶೋ) ಹಾಗೂ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ. 18 ರಂದು ಬೆಳಗ್ಗೆ 10 ಗಂಟೆಗೆ ಜನಪದ ದಸರಾ ಹಾಗೂ ಸಂಜೆ 6.30ಕ್ಕೆ ಯುವ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ. 19 ರಂದು ಬೆಳಗ್ಗೆ 10 ಗಂಟೆಗೆ ಮಹಿಳಾ ದಸರಾ ಹಾಗೂ ಸಂಜೆ 6.30ಕ್ಕೆ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 20 ರಂದು ಆಯುಧ ಪೂಜೆಯ ಅಂಗವಾಗಿ ಸಂಜೆ 6 ಗಂಟೆಯಿಂದ ಗಾಂಧಿ ಮೈದಾನದಲ್ಲಿ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ.21 ರಂದು ವಿಜಯ ದಶಮಿಯಂದು ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ದಸರಾ ಮಂಟಪಗಳ ಆಕರ್ಷಕ ಶೋಭಾಯಾತ್ರೆ ಸಾಗಲಿದೆ. 22 ರಂದು ಬೆಳಗ್ಗೆ 6 ಗಂಟೆಗೆ ಅತಿಥಿಗಳಿಂದ ವಿಜೇತ ದಸರಾ ಮಂಟಪಗಳಿಗೆ ಪ್ರಶಸ್ತಿ ವಿತರಣೆ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ದಕ್ಷ ಬಳಕೆ ಎಲ್ಲರಿಗೂ ಅನಿವಾರ್ಯ: ಅನಂತ ಪದ್ಮನಾಭ
ಪ್ರಜಾಪ್ರಭುತ್ವ ಆಶಯ ಅರಿಯಲು ಯುವಸಂಸತ್ತು ಸಹಕಾರಿ: ಪ್ರೊ.ಆಲೂರ