ಮಣಿಪಾಲ: ಮೈಸೂರಿನ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ದಸರಾ ಕವಿಗೋಷ್ಠಿ ಉದ್ಘಾಟಿಸಲಿರುವ ಹಿರಿಯ ಲೇಖಕಿ ವೈದೇಹಿ ಅವರನ್ನು ಮಣಿಪಾಲದ ಅವರ ನಿವಾಸ ಇರುವಂತಿಗೆಗೆ ಮೈಸೂರಿನಿಂದ ದಸರಾ ಕವಿಗೋಷ್ಠಿ ಉಪಸಮಿತಿ ಶುಕ್ರವಾರ ಬಂದು ಸನ್ಮಾನಿಸುವ ಮೂಲಕ ಆಹ್ವಾನಿಸಿತು. ಈ ಸಂದರ್ಭ ಮಾತನಾಡಿದ ವೈದೇಹಿ, ವಿಜಯನಗರ ಸಾಮ್ರಾಜ್ಯ ಕಾಲದಿಂದ ದಸರಾ ಮಹೋತ್ಸವದ ರಥ ಸಾಗುತ್ತಿದೆ. ಅದು ಕನ್ನಡದ ರಥವಾಗಿದ್ದು, ಮುಂದೆಯೂ ಸಾಂಗವಾಗಿ ಸಾಗಲಿ ಎಂದು ಹಾರೈಸಿದರು.
ಕವಿಗೋಷ್ಠಿ ಉಪಸಮಿತಿಯ ಉಪವಿಶೇಷಾಧಿಕಾರಿ ಡಾ.ಎಂ.ದಾಸೇಗೌಡ, ಕಾರ್ಯಾಧ್ಯಕ್ಷ ಪ್ರೊ.ನಂಜಯ್ಯ ಹೊಂಗನೂರು, ಕಾರ್ಯದರ್ಶಿ ಆನಂದ್ ಎಂ.ಬಿ., ಸಮನ್ವಯಾಧಿಕಾರಿ ಡಾ.ಉಮೇಶ ಬೇವಿನಹಳ್ಳಿ, ಡಾ.ತ್ರಿವೇಣಿ, ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕ ಸಿದ್ದನಾಗಪ್ಪ ಬಿ.ಬಿ. ಹಾಗೂ ಚಂದನಾ, ವೈದೇಹಿ ಪುತ್ರಿ ಚಿತ್ರಕಲಾವಿದೆ ಪಲ್ಲವಿ ಅನಿಲ್ ಹಾಗೂ ಅವರ ಅಳಿಯ ಟಿ.ಅನಿಲಕುಮಾರ್ ಉಪಸ್ಥಿತರಿದ್ದರು.