500 ಧರ್ಮಗುರುಗಳು ದಸರಾ ಉದ್ಘಾಟನೆಯಲ್ಲಿ ಭಾಗಿ

KannadaprabhaNewsNetwork |  
Published : Oct 04, 2026, 01:15 AM IST
11 | Kannada Prabha

ಸಾರಾಂಶ

ಧರ್ಮಗುರುಗಳು ಕುಳಿತುಕೊಳ್ಳಲು ಪ್ರತ್ಯೇಕವಾಗಿ ಆಸನದ ವ್ಯವಸ್ಥೆ ಮಾಡಬೇಕು. ಅ

ಕನ್ನಡಪ್ರಭ ವಾರ್ತೆ ಮೈಸೂರುಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಇದನ್ನು ಸಾರ್ವಜನಿಕರಿಗೆ ಮನದಟ್ಟುಗೊಳಿಸಲು ವಿವಿಧ ಜನಾಂಗದ 500 ಧರ್ಮಗುರುಗಳನ್ನು ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.ಜಿಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮೈಸೂರು ದಸರಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕ್ರೈಸ್ತ, ಮುಸ್ಲಿಂ, ಹಿಂದೂ ಜೈನ್ ಸೇರಿದಂತೆ ವಿವಿಧ ವಿವಿಧ ಧರ್ಮ ಗುರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಧರ್ಮಗುರುಗಳು ಕುಳಿತುಕೊಳ್ಳಲು ಪ್ರತ್ಯೇಕವಾಗಿ ಆಸನದ ವ್ಯವಸ್ಥೆ ಮಾಡಬೇಕು. ಅವರನ್ನು ಗೌರವ ಪೂರ್ವಕವಾಗಿ ಜಿಲ್ಲಾಡಳಿತದಿಂದ ಆಹ್ವಾನಿಸಬೇಕು. ಇವರ ವಾಸ್ತವ್ಯಕ್ಕಾಗಿ ಸುತ್ತೂರು ಮಠದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಭೂ ಸೇನೆ, ವಾಯುಸೇನೆ ಹಾಗೂ ಜಲ ಸೇನೆ ಮೂರು ತಂಡಗಳು ದಸರಾ ಮೆರವಣಿಗೆಯಲ್ಲಿ ಭಾಗವಹಿಸಿ ಶಿಸ್ತು ಮತ್ತು ದೇಶಭಕ್ತಿಯನ್ನು ಸಾರ್ವಜನಿಕರಿಗೆ ಸಾರಲಿದೆ. ಇದಕ್ಕೆ ಬೇಕಿರುವ ಅಗತ್ಯವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿರುವ ಕ್ರೀಡಾಪಟುಗಳನ್ನು ಕ್ರೀಡಾ ದಸರಾದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನಿಸುವಂತೆ ತಿಳಿಸಿದರು.ಪ್ರತಿದಿನ ಇಬ್ಬರು ಸಚಿವರು ದಸರಾ ಕಾರ್ಯಕ್ರಮಗಳ ಉಸ್ತುವಾರಿ ವಹಿಸಲಿದ್ದು, ಪ್ರತಿ ದಿನ ಭಾಗವಹಿಸುವ ಸಚಿವರ ಪಟ್ಟಿಮಾಡಿ ಅವರನ್ನು ಆಹ್ವಾನಿಸಬೇಕು. ಎಲ್ಲಾ ಶಾಸಕರು ಹಾಗೂ ಸಚಿವರನ್ನು ಜಂಬೂ ಸವಾರಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಎಂದರು.ಜಂಬೂಸವಾರಿ ಮೆರವಣಿಗೆಯಲ್ಲಿ 40 ರಿಂದ 50 ಚಲನಚಿತ್ರ ನಟ ನಟಿಯರು ಭಾಗವಹಿಸಲು ಹೆಸರು ಪಟ್ಟಿ ಮಾಡುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಅವರಿಗೆ ತಿಳಿಸಲಾಗಿದೆ. ಕ್ರೀಡಾಪಟುಗಳು ಕೂಡ ಮೆರವಣಿಗೆಯ ಜಂಬೂಸವಾರಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.ದೀಪಾಲಂಕಾರ ದೀಪ ವೈವಿಧ್ಯಮಯ 21 ದಿನಗಳ ನಡೆಯಲಿದೆ ಕಂಬಳವು ಸಂಪ್ರದಾಯದಂತೆ ನಡೆಯಬೇಕು. ಯುವ ದಸರಾ, ಕಂಬಳ ನಡೆಯುವ ಸ್ಥಳಗಳಲ್ಲಿ ಆಹಾರ ಮೇಳ ನಡೆಸುವಂತೆ ತಿಳಿಸಿದರು.ಮೆರವಣಿಗೆಯಲ್ಲಿ ಭಾಗವಹಿಸುವ ಕಲಾ ಪ್ರಕಾರ ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ. ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ಸಾಗಬೇಕು ಎಂದರು.ಅ. 5 ರೊಳಗೆ ಮೈಸೂರು ನಗರದಲ್ಲಿ ಬ್ಯಾನರ್ ಮತ್ತು ಫ್ಲೆಕ್ಸ್ ಗಳನ್ನು ತೆರವುಗೊಳಿಸಬೇಕು. ಫ್ಲೆಕ್ಸ್ ಮತ್ತು ಬ್ಯಾನರ್ ಮುಕ್ತ ದಸರಾ ಆಚರಿಸಬೇಕು. ದಸರಾ ಕಾರ್ಯಕ್ರಮ ಆಯೋಜಿಸಲು ರಚಿಸಲಾಗಿರುವ 18 ಉಪಸಮಿತಿಗಳು ತಮ್ಮ ಕಾರ್ಯಕ್ರಮದ ವಿವರದ ಪಟ್ಟಿಯನ್ನು ಸಚಿವರಿಗೆ ಒದಗಿಸಿ ಯಾವುದೇ ಲೋಪವಿಲ್ಲದಂತೆ ಅಚ್ಚುಕಟ್ಟಾಗಿ ದಸರಾ ಕಾರ್ಯಕ್ರಮ ಸಂಘಟಿಸಬೇಕು ಎಂದು ನಿರ್ದೇಶನ ನೀಡಿದರು.ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ, ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಟಿ.ಎಸ್. ಶ್ರೀವತ್ಸ, ಜಿ.ಟಿ. ದೇವೇಗೌಡ, ತನ್ವೀರ್ ಸೇಠ್, ಕೆ. ಹರೀಶ್ ಗೌಡ, ಸಿ. ಅನಿಲ್ ಕುಮಾರ್, ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಡಾ.ಕೆ. ಶಿವಕುಮಾರ್, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ, ಮೈಲ್ಯಾಕ್ ಅಧ್ಯಕ್ಷ ಗಣೇಶ್, ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಗೇಶಪುರವನ್ನು ಮಾದರಿ ಗ್ರಾಮವನ್ನಾಗಿಸುವ ಸಂಕಲ್ಪ
ಕಲಬುರಗಿ: ಟ್ಯಾಂಕರ್‌ನಲ್ಲಿ ನೀರು ಪೂರೈಕೆ