ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ದಾಸಶ್ರೇಷ್ಠ ಕನಕರು

KannadaprabhaNewsNetwork |  
Published : Nov 19, 2024, 12:47 AM IST
ಸಿಕೆಬಿ-2 ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಕಾರ್ಯಕ್ರಮವನ್ನು ಸಚಿವ ಡಾ. ಎಂ.ಸಿ.ಸುಧಾಕರ್ ಉದ್ಘಾಟಿಸಿದರು | Kannada Prabha

ಸಾರಾಂಶ

ಕನಕದಾಸರು ಮೂಲತಃ ಕುರುಬ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದರು. ಉಡುಪಿ ಶ್ರೀ ಕೃಷ್ಣನ ದೇವಾಸ್ಥಾನದಲ್ಲಿ ವಿಶೇಷವಾಗಿ ಕನಕ ಕಿಂಡಿಯನ್ನು ಈಗಲೂ ಕಾಣಬಹುದು. ದಾಸಶ್ರೇಷ್ಠ ಶ್ರೀ ಕನಕದಾಸ ಅವರ ಕೀರ್ತನೆಗಳು, ಆಚಾರ, ವಿಚಾರಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಮಾಜದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧವಾಗಿ 500 ವರ್ಷಗಳ ಹಿಂದೆಯೇ ಕೀರ್ತನೆಗಳ ರಚನೆಯ ಮೂಲಕ ಜಾಗೃತಿ ಮೂಡಿಸಿದವರು ದಾಸ ಶ್ರೇಷ್ಠ ಶ್ರೀ ಕನಕದಾಸರು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ ಸುಧಾಕರ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಗೂ ಕುರುಬರ ಸಂಘದ ವತಿಯಿಂದ ಸೋಮವಾರ ನಗರದ ಶ್ರೀ ಗುರುರಾಜ ಕಲ್ಯಾಣ ಮಂಟಪ ಮುಂಭಾಗದಲ್ಲಿ ನಡೆದ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನಕದಾಸರು ಶ್ರೀಕೃಷ್ಣನ ಪರಮ ಭಕ್ತರಾದ್ದರಿಂದ ಅವರಿಗೂ ಉಡುಪಿಯ ಶ್ರೀಕೃಷ್ಣ ಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದರು.

ಜಾತಿ ಪದ್ಧತಿಗೆ ವಿರೋಧ

ಕನಕದಾಸರು ಮೂಲತಃ ಕುರುಬ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದರು. ಉಡುಪಿ ಶ್ರೀ ಕೃಷ್ಣನ ದೇವಾಸ್ಥಾನದಲ್ಲಿ ವಿಶೇಷವಾಗಿ ಕನಕ ಕಿಂಡಿಯನ್ನು ಈಗಲೂ ಕಾಣಬಹುದು. ದಾಸಶ್ರೇಷ್ಠ ಶ್ರೀ ಕನಕದಾಸ ಅವರ ಕೀರ್ತನೆಗಳು, ಆಚಾರ, ವಿಚಾರಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ ಪದ್ಧತಿಯ ವಿರುದ್ದವಾಗಿ ಕೀರ್ತನೆಗಳ ಮೂಲಕ ತಮ್ಮ ನಿಲುವು ಪ್ರದಿಪಾದಿಸಿ ಪರಿವರ್ತನೆ ಹಾಗೂ ಸುಧಾರಣೆಗೆ ಶ್ರಮಿಸಿದವರು ಕನಕದಾಸರು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಮಹಾನ್ ನಾಯಕರ ಜಯಂತಿಗಳನ್ನು ಚಿಕ್ಕಬಳ್ಳಾಪುರ ನಗರದಲ್ಲಿನ ಕನ್ನಡ ಭವನ ಕಟ್ಟಡದ ಭವ್ಯವಾದ ಸಭಾಂಗಣದಲ್ಲಿ ನಡೆಸಲಾಗುವುದು. ಜಿಲ್ಲಾ ಕೇಂದ್ರದಲ್ಲಿ ಕುರುಬ ಸಮುದಾಯ ಭವನ ನಿರ್ಮಾಣದ ಭರವಸೆ ನೀಡಿದರು.

ಜನಾಂಗ ಶಿಕ್ಷಣಕ್ಕೆ ಒತ್ತು ನೀಡಲಿಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಸಮುದಾಯದವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಸಮಾಜದ ಹೆಸರು ಉನ್ನತವಾಗಿ ಬೆಳೆಯ ಬೇಕಾದರೆ ಸಮುದಾಯದ ಮಕ್ಕಳು ಸಾಧಕರಾಗಬೇಕು. ಕನಕನನ್ನು ಕೆಣಕ ಬೇಡ, ಕೆಣಕಿ ತಿಣಕ ಬೇಡ ಎಂದು ದಾಸಶ್ರೇಷ್ಠ ಶ್ರೀ ಕನಕದಾಸರ ಕೀರ್ತನೆಯನ್ನು ಹಾಡಿ ಹೊಗಳಿದರು.

ಪಲ್ಲಕ್ಕಿ ಮೆರವಣಿಗೆಗೆ ಚಾಲನೆ

ಶಿಕ್ಷಕ ಬಿ. ಮಂಜುನಾಥ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಮುದಾಯದ ಸಾಧಕರಿಗೆ ಸನ್ಮಾನಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಉನ್ನತ ಶಿಕ್ಷಣ ಸಚಿವರು ನಗರದ ಎಂ.ಜಿ ರಸ್ತೆಯಲ್ಲಿರುವ ಶ್ರೀ ಮರಳಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದಾಸಶ್ರೇಷ್ಠ ಶ್ರೀ ಕನಕದಾಸರ ಪಲ್ಲಕ್ಕಿ ಮತ್ತು ಜಾನಪದ ಕಲಾತಂಡದ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ. ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ,ತಹಸೀಲ್ದಾರ್ ಅನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ.ರವಿ ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ.ನಾಗರಾಜ್, ತಾಲ್ಲೂಕು ಅಧ್ಯಕ್ಷ ಎಂ.ಆನಂದ್ ಸಮುದಾಯದ ಪ್ರಮುಖ ಮುಖಂಡರು, ವಿದ್ಯಾರ್ಥಿಗಳು,ಸಾರ್ವಜನಿಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ