ವಿಘ್ನೇಶ್ ಎಂ. ಭೂತನಕಾಡು
ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ದಶ ಮಂಟಪಗಳ ಶೋಭಾಯಾತ್ರೆ ವೈಭವದಿಂದ ಕೂಡಿತ್ತು. ಆದರೆ ಈ ಬಾರಿಯೂ ತೀರ್ಪುಗಾರಿಕೆಗೆ ಮಾತ್ರ ಪ್ರದರ್ಶನ ನೀಡಿದ್ದು, ಜನರನ್ನು ನಿರಾಸೆಗೊಳಿಸಿತು.
ದಶ ಮಂಟಪಗಳ ಶೋಭಾಯಾತ್ರೆಯನ್ನು ಕಣ್ತುಂಬಿಸಿಕೊಳ್ಳಲು ಮಡಿಕೇರಿಗೆ ಸಾವಿರಾರು ಮಂದಿ ಆಗಮಿಸಿದ್ದರು. ನಗರದ ರಸ್ತೆಯುದ್ದಕ್ಕೂ ಎಲ್ಲಿ ನೋಡಿದರೂ ಜನರ ದಂಡೇ ಕಂಡುಬಂತು. ಆದರೆ ಎಲ್ಲರಿಗೂ ಮಂಟಪಗಳ ಪ್ರದರ್ಶನ ಕಾಣಲು ಸಿಗಲಿಲ್ಲ.ಪೇಟೆ ಶ್ರೀ ರಾಮ ಮಂದಿರ ದೇವಾಲಯದ ಮಂಟಪ ಮೊದಲು ಹೊರಡುವ ಮೂಲಕ ಇತರೆ ಮಂಟಪಗಳನ್ನು ಸ್ವಾಗತಿಸಿತು. ದಶಮಂಟಪಗಳ ಶೋಭಾಯಾತ್ರೆ ಶನಿವಾರ ಮಡಿಕೇರಿಯಲ್ಲಿ ಇರುಳನ್ನು ಬೆಳಕಾಗಿಸಿತು. ಎಲ್ಲಿ ನೋಡಿದರೂ ದೇವಾನು ದೇವತೆಗಳು ಅಸುರರನ್ನು ಸಂಹಾರ ಮಾಡುವ ಕಲಾಕೃತಿಗಳು ಗಮನ ಸೆಳೆದವು.
ನೂರಾರು ವರ್ಷಗಳ ಇತಿಹಾಸವಿರುವ ಪೇಟೆ ಶ್ರೀ ರಾಮಮಂದಿರ ದೇವಾಲಯ ಲೋಕ ಕಲ್ಯಾಣಕ್ಕಾಗಿ ವಿಷ್ಣುವಿನ ಮತ್ಸ್ಯಾವತಾರ, ದೇಚೂರು ರಾಮ ಮಂದಿರ ದೇವಾಲಯ ಸಮಿತಿಯಿಂದ 106ನೇ ವರ್ಷದ ಉತ್ಸವ ಹಿನ್ನೆಲೆಯಲ್ಲಿ ಕಾಳಿಂಗ ಮರ್ದನ , 62ನೇ ವರ್ಷದ ಉತ್ಸವದಲ್ಲಿದ್ದ ಚೌಡೇಶ್ವರಿ ದೇವಾಲಯದ ಮಂಟಪದಲ್ಲಿ ಅರುಣಾಸುರನ ವಧೆ, 51ನೇ ವರ್ಷದ ಸಂಭ್ರಮದಲ್ಲಿದ್ದ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಮಂಟಪದಲ್ಲಿ ಕದಂಬ ಕೌಶಿಕೆ, ಕರವಲೆ ಮಹಿಷ ಮರ್ದಿನಿ ದೇವಾಲಯದ 29ನೇ ವರ್ಷದ ಉತ್ಸವ ಹಿನ್ನೆಲೆಯಲ್ಲಿ ಶ್ರೀ ಕೊಲ್ಲೂರು ಮುಕಾಂಬಿಕೆ ಮಹಿಮೆ ಕಥಾ ಸಾರಾಂಶ ಗಮನ ಸೆಳೆಯಿತು.
ಯುವಕರಿಂದ ಕಿರಿಕಿರಿ: ದಶಮಂಟಪ ಶೋಭಾಯಾತ್ರೆ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಾಗರೋಪಾದಿಯಲ್ಲಿ ಜನರು ನಡೆದಾದುಕೊಂಡು ಹೋಗುತ್ತಿದ್ದರು. ಯುವಕರ ತಂಡಗಳಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಯಿತು. ಜನರ ಮಧ್ಯೆ ಜೋರಾಗಿ ಕಿರುಚುತ್ತಾ ಸಾರ್ವಜನಿಕರಿಗೆ ತೊಂದೆಯುಂಟು ಮಾಡಿದರು. ಕೆಲವರಿಗೆ ಈ ವೇಳೆ ಪೊಲೀಸರು ಎಚ್ಚರಿಕೆ ನೀಡಿದರು. ಮಂಟಪದ ಪ್ರದರ್ಶನ ವೇಳೆ ನೂಕು ನುಗ್ಗಲು ಉಂಟಾಗಿ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಪರದಾಡಿದ ದೃಶ್ಯ ಕಂಡುಬಂತು.
10 ಮಂಟಪಗಳು ಕೂಡ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾ ಉತ್ಸವಕ್ಕೆ ತೆರೆ ಬಿದ್ದಿತು.
ದಶಮಂಟಪಗಳ ಶೋಭಾಯಾತ್ರೆಯಲ್ಲಿ ಶ್ರೀ ಕೋಟೆ ಮಹಾ ಗಣಪತಿ ದೇವಾಲಯ ಪ್ರಥಮ, ಶ್ರೀ ಕೋಟೆ ಮಾರಿಯಮ್ಮ ದೇವಾಲಯ ದ್ವಿತೀಯ ಹಾಗೂ ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಮಂಟಪ ತೃತೀಯ ಸ್ಥಾನ ಪಡೆಯಿತು. ವಿಜೇತ ಮಂಟಪಗಳಿಗೆ ಚಿನ್ನದ ನಾಣ್ಯವನ್ನು ಬಹುಮಾನವಾಗಿ ನೀಡಲಾಯಿತು. ವಿಜೇತ ಮಂಟಪದ ಸಮಿತಿಯ ಕಾರ್ಯಕರ್ತರು ನಗರದಲ್ಲಿ ಪ್ರಶಸ್ತಿಯೊಂದಿಗೆ ಮೆರವಣಿಗೆ ನಡೆಸಿ ವಾದ್ಯಗೋಷ್ಠಿಗೆ ನೃತ್ಯ ಮಾಡಿ ಸಂಭ್ರಮಿಸಿದರು.
ಮಡಿಕೇರಿ ದಸರಾ ದಶ ಮಂಟಪಗಳ ಶೋಭಾಯಾತ್ರೆಯ ತೀರ್ಪುಗಾರಿಕೆಯಲ್ಲಿ ರಾಜಕೀಯ ನಡೆದಿದೆ. ತೀರ್ಪುಗಾರಿಕೆಯಿಂದ ನಮ್ಮ ಮಂಟಪವನ್ನು ಹೊರಗಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕರವಲೆ ಮಹಿಷ ಮರ್ದಿನಿ ದೇವಾಲಯ ಮಂಟಪ ಸಮಿತಿ ಸದಸ್ಯರು ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಮಡಿಕೇರಿಯ ಗಾಂಧಿ ಮೈದಾನದಲ್ಲಿ ಭಾನುವಾರ ಬೆಳಗ್ಗೆ 6.30ಕ್ಕೆ ಮಂಟಪಗಳ ಪ್ರಶಸ್ತಿಯನ್ನು ಘೋಷಣೆ ಮಾಡಲಾಯಿತು. ಈ ಸಂದರ್ಭ ವೇದಿಕೆ ಏರಿದ ಸದಸ್ಯರು ತೀರ್ಪುಗಾರರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಮೋಸ...ಮೋಸ... ಎಂದು ಸದಸ್ಯರು ತೀರ್ಪುಗಾರರಿಗೆ ಧಿಕ್ಕಾರ ಹಾಕಿದರು. ಪ್ರತಿಭಟನೆಗೆ ಮುಂದಾದ ಸಂದರ್ಭ ದೇವಾಲಯ ಸಮಿತಿಯ ಕಾರ್ಯಕರ್ತರನ್ನು ಪೊಲೀಸರು ನಿಯಂತ್ರಿಸಿದರು.