ಕನ್ನಡಪ್ರಭ ವಾರ್ತೆ ಬೆಳಗಾವಿ

ಯೋಗಾಸನ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಪಾತ್ರ ಹೊಂದಿದ್ದು, ನಿತ್ಯ ಯೋಗ ಮಾಡುವುದರಿಂದ ಶರೀರದಲ್ಲಿನ ರೋಗ ರುಜಿನಗಳನ್ನು ದೂರ ಮಾಡಿಕೊಳ್ಳಬಹುದು ಅಲ್ಲದೇ, ಮನಸ್ಸನ್ನು ಸಮಚಿತ್ತದಿಂದ ಇಟ್ಟುಕೊಳ್ಳಬಹುದು ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ ಹಾಗೂ ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆಯುಷ್‌ ಇಲಾಖೆ ಸಹಯೋಗದಲ್ಲಿ ಭಾನುವಾರ ಸುವರ್ಣ ವಿಧಾನ ಸೌಧದಲ್ಲಿ ಜರುಗಿದ 12ನೇ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬದಲಾಗುತ್ತಿರುವ ಇಂದಿನ‌ ಆಧುನಿಕ ಜೀವನ ಶೈಲಿಯಲ್ಲಿ ಉತ್ತಮ‌ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗ ಅತೀ ಅವಶ್ಯಕವಾಗಿದೆ. ಸ್ಪರ್ಧಾತ್ಮಕ ಜಿವನ ಶೈಲಿಯಲ್ಲಿ ನಮ್ಮ ನಿತ್ಯದ ಕೆಲಸದಲ್ಲಿ ನಿಪುಣತೆಯನ್ನು ಸಾಧಿಸಲು ಯೋಗಾಸನ ಅಗತ್ಯವಾಗಿದ್ದು ಯೋಗಾಸನ ಮಾಡಲು ಸರಿಯಾದ ಆಸನದ ಜ್ಞಾನ ಹೊಂದುವುದು ಕೂಡ ಅಷ್ಟೇ ಪ್ರಮುಖವಾಗಿದೆ. ವೇದ ಉಪನಿಷತ್ತುಗಳ ಪ್ರಕಾರ ಜೂನ್ 21ನೇ ದಿನ ಪ್ರಾಮುಖ್ಯತೆಯನ್ನು ಹೊಂದಿದ ದಿನವಾದ್ದರಿಂದ ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ.

ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಯೋಗವನ್ನು 140 ಕ್ಕೂ ಹೆಚ್ಚಿನ ದೇಶಗಳು ಒಪ್ಪಿಕೊಂಡಿವೆ. ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರಪಂಚದ ಯಾವುದಾದರೂ ಒಂದು ಪ್ರದೇಶದಲ್ಲಿ ಯೋಗಾಭ್ಯಾಸ ಜರುಗುತ್ತಿರುವುದರಿಂದ ಯೋಗಕ್ಕೆ ಗೋಲ್ಡನ್ ರಿಂಗ್ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕ ಅಭಯ ಪಾಟೀಲ, ಮೇಯರ್‌ ಪ್ರೀತಿ ಕಾಮಕರ, ಉಪ ಮೇಯರ್‌ ಹನುಂಮತ‌ ಕೊಂಗಾಲಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೋಲಿಸ್ ಆಯುಕ್ತ ಭೋರಸೆ ಗುಲಾಬರಾವ್ ಭೂಷಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಪಂ ಸಿಇಒ ರಾಹುಲ ಶಿಂಧೆ, ಪಾಲಿಕೆ ಆಯುಕ್ತ ಕಾರ್ತಿಕ.ಎಂ, ಪ್ರಶಿಕ್ಷಣಾರ್ಥಿ ಐಎಎಸ್‌ ಅಧಿಕಾರಿ ರೋಹಿತ್ ಸಿಂಗ್, ಜಿಲ್ಲಾ ಆಯುಷ್ ಅಧಿಕಾರಿ ಶ್ರೀಕಾಂತ ಸುಣದೊಳಿ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಯೋಗಾಸಕ್ತರು ಭಾಗವಹಿಸಿದ್ದರು.


ಅಂತಾರಾಷ್ಟ್ರಿಯ ಯೋಗ ತರಬೇತುದಾರೆ ಆರತಿ ಸಂಕೇಶ್ವರಿ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಯೋಗ ಪಟುಗಳಾದ ಸತ್ಯಮ್ ಹಾಗೂ ಗಾಯತ್ರಿ ಅವರಿಂದ ವಿವಿಧ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿ ಅವುಗಳ ಮಹತ್ವವನ್ನು ವಿವರಿಸಿದರು. ತದನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.