ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭಹಾರೈಸಿದ ಯಡಿಯೂರಪ್ಪ
ಕನ್ನಡಪ್ರಭ ವಾರ್ತೆ ತುಮಕೂರುವಿನಯ ಬಿದರೆ ಸ್ನೇಹ ಬಳಗದ ವತಿಯಿಂದ ನಗರದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಯ ೫ನೇ ಪುಣ್ಯ ಸ್ಮರಣೆ ಅಂಗವಾಗಿ ದಾಸೋಹ ದಿನ ಆಚರಿಸಲಾಯಿತು.
ದಾಸೋಹ ದಿನಕ್ಕೆ ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಯು ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ಭಾವಚಿತ್ರಕ್ಕೆ ಪುಷಾರ್ಚನೆ ಸಲ್ಲಿಸಿ, ನೆರೆದಿದ್ದ ಭಕ್ತರಿಗೆ ದಾಸೋಹ ಬಡಿಸುವ ಮೂಲಕ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಬಸವಣ್ಣನವರ ಕಾಯಕ ಮತ್ತು ದಾಸೋಹ ಎಂಬ ಪರಿಕಲ್ಪನೆಯನ್ನು ಇಡೀ ಭಾರತಕ್ಕೆ ಪರಿಚಯಿಸಿದ ಕೀರ್ತಿ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಸಲ್ಲುತ್ತದೆ. ಅವರು ಬದುಕಿದ್ದಾಗ ಭಕ್ತರಿಗೆ ಗುರುವಂದನೆಯ ನೇಪದಲ್ಲಿ ದಾಸೋಹ ನಡೆಯುತ್ತಿದ್ದು, ಅವರ ಲಿಂಗೈಕ್ಯದ ನಂತರ ಪುಣ್ಯಸ್ಮರಣೆಯ ಹೆಸರಿನಲ್ಲಿ ಲಕ್ಷಾಂತರ ಜನರಿಗೆ ದಾಸೋಹ ದೊರೆಯುತ್ತಿದೆ. ವಿನಯ್ ಬಿದರೆ ಮತ್ತು ಸ್ನೇಹಿತರು ಸೇರಿ ಸರಕಾರ ಜಾರಿಗೆ ತಂದ ದಾಸೋಹ ದಿನವನ್ನು ವಿಶಿಷ್ಟವಾಗಿ ಮತ್ತು ಅಚ್ಚುಕಟ್ಟಾಗಿ ನಡೆಸುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ ಬಿದರೆ ಮಾತನಾಡಿ, ನಾನು ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿ, ಐದಾರು ವರ್ಷಗಳ ಕಾಲ ಮಠದ ವಿದ್ಯಾರ್ಥಿಯಾಗಿ ನನಗೆ ಸ್ವಾಮೀಜಿ ನೀಡಿದ ಮಾರ್ಗದರ್ಶನವೇ ಇಂದು ರಾಜಕಾರಣದಲ್ಲಿ, ಇನ್ನಿತರ ಕ್ಷೇತ್ರಗಳಲ್ಲಾಗಲಿ ನಾವು ಮಾಡಿರುವ ಕೆಲಸಗಳ ಹಿಂದಿನ ಸ್ಪೂರ್ತಿ. ಡಾ.ಶ್ರೀ ಶಿವಕುಮಾರ ಸ್ವಾಮೀಜಿಯನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಹೆಸರಿನಲ್ಲಿ ಪುಣ್ಯಸ್ಮರಣೆಯ ದಿನ ದಾಸೋಹದ ದಿನವಾಗಿ ಆಚರಿಸುವ ಮೂಲಕ ಅವರಿಂದ ಪಡೆದ ಜ್ಞಾನದ ಋಣ ತೀರಿಸುತ್ತಿದ್ದೇವೆ ಎಂದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿನಯ್ ಬಿದರೆ ಸ್ನೇಹ ಬಳಗ ಆಯೋಜಿಸಿದ್ದ ದಾಸೋಹದ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಶುಭ ಹಾರೈಸಿದರು. ಈ ವೇಳೆ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಪಾಲಿಕೆ ಸದಸ್ಯ ವಿಷ್ಣುವರ್ಧನ್, ಜಿಲ್ಲಾ ಬೋವಿ ಸಂಘದ ಜಿಲ್ಲಾಧ್ಯಕ್ಷ ಓಂಕಾರ್,ಪಾಲಿಕೆ ಮಾಜಿ ಸದಸ್ಯ ಕರುಣಾರಾಧ್ಯ, ಭಗತ್ ಕ್ರಾಂತಿ ಸೇನೆಯ ಅರಾಧ್ಯ, ಚೇತನ್, ಟಿ.ಡಿ.ವಿನಯ್,ರುದ್ರೇಶ್, ವಿರುಪಾಕ್ಷ, ಗಿರೀಶ್, ಚಂದನ್, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.