ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ತಾಲೂಕಿನ ಬಂಡಿಗಣಿಯ ನೀಲಮಾಣಿಕ ಮಠದ ಶ್ರೀಗಳಿಗೆ ರಾಜ್ಯೋತ್ಸವ ನಿಮಿತ್ತ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಅವರನ್ನು ಸನ್ಮಾನಿಸಿ ನಂತರ ಮಾತನಾಡಿದ ಶ್ರೀಗಳು, ಮನುಷ್ಯನಾಗಿ ಜನ್ಮ ಪಡೆಯುವುದು ಅಪರೂಪ. ಮೋಕ್ಷ ಪಡೆಯುವ ಇಚ್ಛೇಹೊಂದುವುದು ಅಪರೂಪ, ಮೋಕ್ಷದ ಮಾರ್ಗ ತೋರಿಸುವ ಸಮರ್ಥ ಸದ್ಗುರು ದೊರಕುವುದೂ ಇನ್ನೂ ಅಪರೂಪ. ಈ ಮೂರು ಅಪರೂಪದ ಯೋಗಗಳನ್ನು ಪಡೆಯುತ್ತಿರುವ ಭಕ್ತರ ಭಾಗ್ಯವೆಂದರು. ದಾಸೋಹ ಚಕ್ರವರ್ತಿಯಾಗಿ ರಾಜ್ಯವಷ್ಟೇ ಅಲ್ಲದೆ ನೆರೆಯ ರಾಜ್ಯಗಳಲ್ಲಿಯೂ ಅನ್ನದಾಸೋಹ ಮೂಲಕ ಸೈ ಎನ್ನಿಸಿಕೊಂಡಿರುವ ಅನ್ನದಾನೇಶ್ವರ ಶ್ರೀಗಳ ಕಾರ್ಯ ವಿಶ್ವವ್ಯಾಪಿ ಹರಡಲೆಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅನ್ನದಾನೇಶ್ವರ ಶ್ರೀಗಳು, ದಾಸೋಹವಿಲ್ಲದೆ ಕಾಯಕವಾಗದು, ಕಾಯಕ-ದಾಸೋಹಗಳ ಜೊತೆ ಸೇರುವ ಇನ್ನೊಂದು ತತ್ವ ಪ್ರಸಾದ-ವ್ಯಾವಹಾರಿಕ ಅರ್ಥದಲ್ಲಿ ಊಟ. ಸತ್ಯ ಶುದ್ಧ ಕಾಯಕದಿಂದ ಸಮಾಜದ ಶ್ರೇಯಸ್ಸಿಗೆ ದಾಸೋಹದ ಮೂಲಕ ಬಳಸಿದಾಗ ತಾನುಣ್ಣುವ ಊಟ ಪ್ರಸಾದವೆಂದರು. ಕೊಣ್ಣೂರಿನ ಹೊರಗಿನ ಕಲ್ಯಾಣಮಠದ ಡಾ. ಶ್ರೀ ವಿಶ್ವಪ್ರಭುದೇವ ಮಹಾಸ್ವಾಮೀಜಿ, ಜಮಖಂಡಿ ಮುತ್ತಿನಕಂತಿಮಠದ ಶ್ರೀ ಶಿವಲಿಂಗ ಪಂಡಿತಾರಾಧ್ಯ ಸ್ವಾಮೀಜಿ, ಬಾವಲತ್ತಿ ಶ್ರೀಗಳು, ಶಿವಾನಂದ ಹಿರೇಮಠ ವೇದಿಕೆ ಮೇಲಿದ್ದರು. ಸುಮಾರು ೧೦ ಸಾವಿರಕ್ಕೂ ಅಧಿಕ ಭಕ್ತರು ನೆರೆದಿದ್ದು ವಿಶೇಷವಾಗಿತ್ತು.