ಚನ್ನಪಟ್ಟಣ: ತಾಲೂಕಿನ ದಶವಾರ ಮುಖ್ಯ ರಸ್ತೆ ಡಾಂಬರೀಕರಣ ವಿಳಂಬ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿದ್ದು, ಸರಕಾರದಿಂದ ಕಣ್ವ ಡ್ಯಾಂನಿಂದ ಮಾಕಳಿಯ ಪ್ಲಾಂಟೇಷನ್ ದೊಡ್ಡಿವರೆಗಿನ ರಸ್ತೆ ಡಾಂಬರೀಕರಣಕ್ಕಾಗಿ ೧೦ ಕೋಟಿ ಹಣ ಬಿಡುಗಡೆಯಾಗಿದೆ. ಗುತ್ತಿಗೆಗಾರ ರಸ್ತೆ ಅಗೆದು ಜಲ್ಲಿ ಹಾಕಿ ಹೋಗಿದ್ದಾರೆ. ಕಾಮಗಾರಿ ಮುಂದುವರಿಸದೆ ಜಲ್ಲಿ ಕಲ್ಲುಗಳು ಮೇಲೆದ್ದಿದ್ದು, ಇದರಿಂದ ರಸ್ತೆಯಲ್ಲಿ ಓಡಾಡುವುದೆ ಕಷ್ಟವಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆಂದು ಕಿಡಿಕಾರಿದರು.
ಟೆಂಡರ್ ಪಡೆದ ಗುತ್ತಿಗೆದಾರ ನಕಲಿ ಬ್ಯಾಂಕ್ ಗ್ಯಾರಂಟಿ ನೀಡಿದ್ದ ಕಾರಣ ಆತನನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿದ್ದು, ರಸ್ತೆ ಟೆಂಡರ್ ರದ್ದುಗೊಳಿಸಲಾಗಿದೆ. ಈ ವಿಚಾರ ಅಧಿಕಾರಿಗಳಿಗೆ ತಿಳಿದಿದ್ದರೂ ಪರ್ಯಾಯ ಕ್ರಮಗಳನ್ನು ಕೈಗೊಳ್ಳದ ಕಾರಣ ಕಾಮಗಾರಿ ಅಪೂರ್ಣಗೊಂಡಿದೆ. ಈ ಸಂಬಂಧ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಧಿಕಾರಿಗಳ ಭೇಟಿ:
ಪಟ್ಟು ಸಡಲಿಸದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಇಇ ಮಹದೇವಯ್ಯ ಆಗಮಿಸಿ ಒಂದೆರಡು ದಿನಗಳಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.