ಕನ್ನಡಪ್ರಭ ವಾರ್ತೆ ಬೆಂಗಳೂರು
ಶಕ್ತಿ ಭವನದಲ್ಲಿ ಗುರುವಾರ ಇಂಧನ ಸಚಿವ ಕೆ.ಜೆ.ಜಾರ್ಜ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನಡೆಸಿದ ಪ್ರಾಥಮಿಕ ಸಭೆಯಲ್ಲಿ ಮೂರು ನಗರಗಳಲ್ಲಿ ಡೇಟಾ ಪಾರ್ಕ್ ಸ್ಥಾಪನೆಗೆ ಚರ್ಚಿಸಿ ತೀರ್ಮಾನಿಸಲಾಯಿತು.
ಈ ಕುರಿತು ಮಾಹಿತಿ ನೀಡಿರುವ ಸಚಿವ ಎಂ.ಬಿ.ಪಾಟೀಲ್, ಬೆಂಗಳೂರಿನಲ್ಲಿ ಹೊಸಕೋಟೆಯ ಸಮೀಪ 500 ಮೆಗಾವ್ಯಾಟ್ ಸಾಮರ್ಥ್ಯದ ಸುಸ್ಥಿರ ಡೇಟಾ ಪಾರ್ಕ್ ಸ್ಥಾಪಿಸಲಾಗುವುದು. ಪಾವಗಡದಿಂದ ಪೂರೈಕೆಯಾಗುವ ಸೌರ ವಿದ್ಯುತ್ ನೇರವಾಗಿ ಅಲ್ಲಿಗೆ ತಲುಪುತ್ತದೆ. ಹೊಸಕೋಟೆ ಸಮೀಪದ ಕೇಂದ್ರಕ್ಕೆ ಬೆಂಗಳೂರು ಜಲಮಂಡಳಿಯು ಎರಡು ಹಂತಗಳಲ್ಲಿ ಸಂಸ್ಕರಿಸಿದ 60 ಎಂಎಲ್‌ಡಿ ನೀರು ಪೂರೈಕೆಗೆ ಸಮಸ್ಯೆಯಿಲ್ಲ ಎಂದು ತಿಳಿಸಿದೆ. ಆ ನೀರನ್ನು ಉದ್ಯಮಿಗಳು ಮೂರನೇ ಹಂತದ ಶುದ್ಧಿಕರಣ ಮಾಡಿಕೊಳ್ಳುತ್ತಾರೆ ಎಂದರು.ಮಂಗಳೂರಿನಲ್ಲಿ ಕೂಡ ಡೇಟಾ ಪಾರ್ಕ್ ಸ್ಥಾಪನೆಗೆ ಭೂಮಿ ಲಭ್ಯವಿದೆ. ಅಲ್ಲಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿಗೆ ಸೇರಿದ 350 ಎಕರೆ ಭೂಮಿಯಿದೆ. ಮೈಸೂರಿನಲ್ಲಿ ಡೇಟಾ ಪಾರ್ಕ್ ಸ್ಥಾಪನೆಗೆ ಸೂಕ್ತ ಜಾಗ ಗುರುತಿಸಲಾಗುವುದು. ಈ ಮೂರೂ ಪಾರ್ಕುಗಳ ಒಟ್ಟು ಸಾಮರ್ಥ್ಯ 1,000 ಮೆಗಾವ್ಯಾಟ್ ಇರಲಿದೆ. ಈ ಪಾರ್ಕ್‌ಗಳಲ್ಲಿ ಯಾರೇ ಬಂದು ಡಾಟಾ ಸೆಂಟರ್ ಸ್ಥಾಪಿಸಿದರೆ ಅವರಿಗೆ ವಿದ್ಯುತ್ ಮತ್ತು ನೀರು ನೀಡಲಾಗುವುದು. ಅದಕ್ಕೆ ಪೂರಕವಾದ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯದಲ್ಲೇ ಹೂಡಿಕೆದಾರರ ಸಭೆ ನಡೆಸಲಾಗುವುದು ಎಂದು ಹೇಳಿದರು.
ಮುಂದಿನ ಹಂತದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೊಳಗೊಂಡ ಸಚಿವರ ತಂಡ ಮತ್ತು ಉನ್ನತಾಧಿಕಾರಿಗಳ ತಂಡವನ್ನು ರಚಿಸಲಾಗುವುದು. ಶೀಘ್ರ ಡೇಟಾ ಪಾರ್ಕ್ ಸ್ಥಾಪನೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.