-ಪಾರ್ಕಿಂಗ್, ರಸ್ತೆ ಸಂಚಾರ ಸೇರಿದಂತೆ ಮೂಲಭೂತ ಸವಲತ್ತುಗಳ ಪರಿಶೀಲನೆ, ಡಿ. 24 ರಿಂದ 3 ದಿನ ದತ್ತ ಜಯಂತಿ ಉತ್ಸವ, ಪ್ರವಾಸಿಗರಿಗೆ ಗಿರಿ ಪ್ರದೇಶದಲ್ಲಿ ನಿರ್ಬಂಧಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ ಹಾಗೂ ಇತರೆ ಅಧಿಕಾರಿಗಳು, ದತ್ತಪೀಠ ಸಂವರ್ಧನಾ ಸಮಿತಿಯವರು ಗುರುವಾರ ದತ್ತಪೀಠ ಸೇರಿದಂತೆ ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂರು ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ರಾಜ್ಯದ ವಿವಿಧೆಡೆಯಿಂದ ದತ್ತಭಕ್ತರು ಆಗಮಿಸಲಿದ್ದಾರೆ. ದತ್ತ ಪೀಠಕ್ಕೆ ಹೋಗುವ ಮಾರ್ಗದಲ್ಲಿ ಲಾಂಗ್ ಚಸ್ಸಿ ಬಸ್ಸುಗಳ ಸಂಚಾರಕ್ಕೆ ಅವಕಾಶ ಇಲ್ಲ, ಹಾಗಿದ್ದೂ ಭಕ್ತರು ಬಸ್ಸುಗಳಲ್ಲಿ ಬಂದರೆ ಆ ಬಸ್ಸುಗಳನ್ನು ಅಲ್ಲಂಪುರ ಬಳಿ ನಿಲ್ಲಿಸಲು ಮಾಡಿರುವ ಪಾರ್ಕಿಂಗ್ ಸ್ಥಳವನ್ನು ಪರಿಶೀಲನೆ ನಡೆಸಲಾಯಿತು.ನಂತರ ಹೊನ್ನಮ್ಮನಹಳ್ಳ, ದತ್ತಪೀಠದಲ್ಲಿರುವ ಬ್ಯಾರಿಕೇಡ್, ಗುಹೆಯ ಒಳ ಭಾಗ, ಗುಹೆಯಿಂದ ಹೊರಗೆ ಹೋಗುವ ಮಾರ್ಗ, ಹೋಮ ನಡೆಯುವ ಸ್ಥಳ, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಲಾಯಿತು. ದತ್ತಪೀಠದಲ್ಲಿ ಉತ್ಸವದ ಸಂದರ್ಭದಲ್ಲಿ ವಿದ್ಯುತ್ ನಿಲುಗಡೆಯಾಗದಂತೆ ಮೆಸ್ಕಾಂ ಅಧಿಕಾರಿಗಳಿಗೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚನೆ ನೀಡಿದರು.
ಗಿರಿ ಪ್ರದೇಶದಲ್ಲಿ ಪ್ರವಾಸಿಗರಿಗೆ ನಿರ್ಬಂಧ
ಡಿ. 24 ರಿಂದ ಡಿ. 26 ರವರೆಗೆ ದತ್ತಪೀಠದಲ್ಲಿ ದತ್ತ ಜಯಂತಿ ನಡೆಯುವ ಹಿನ್ನಲೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಲಿದ್ದಾರೆ. ದತ್ತಪೀಠಕ್ಕೆ ತೆರಳುವ ಮಾರ್ಗ ಕಿರಿದಾಗಿದ್ದು, ವಾಹನ ದಟ್ಟಣೆ ಹಾಗೂ ಹೆಚ್ಚಿನ ಜನ ಸಂದಣಿಯಾಗಿ ಅನಾನುಕೂಲವಾಗುವ ಸಂಭವ ಇದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶದಲ್ಲಿ ತಿಳಿಸಿದ್ದಾರೆ.
ದತ್ತಜಯಂತಿ ಹಿನ್ನಲೆಯಲ್ಲಿ ದತ್ತಪೀಠಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.