- 300ಕ್ಕೂ ಹೆಚ್ಚು ಕಡೆಗಳಲ್ಲಿ ಸಿ.ಸಿ.ಟಿವಿ ಕ್ಯಾಮರಾ । ಜಿಲ್ಲೆಯಾದ್ಯಂತ 28 ಚೆಕ್ ಪೋಸ್ಟ್‌ಗಳು । ಶೃಂಗಾರಗೊಂಡ ಚಿಕ್ಕಮಗಳೂರು
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ 3 ದಿನಗಳ ಕಾಲ ಹಮ್ಮಿಕೊಂಡಿರುವ ದತ್ತಜಯಂತಿ ಉತ್ಸವಕ್ಕೆ ಭಾನುವಾರ ಅಧಿಕೃತ ಚಾಲನೆ ಸಿಗಲಿದೆ.
ಉತ್ಸವದ ಹಿನ್ನಲೆಯಲ್ಲಿ ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳು ಕೇಸರಿ ಮಯವಾಗಿವೆ. ಬ್ಯಾನರ್‌ಗಳು, ಕಟೌಟ್ ಗಳು, ಭಗವಧ್ವಜಗಳು ಹಾರಾಡುತ್ತಿವೆ. ದತ್ತಜಯಂತಿ ದಿನದಂದು ದತ್ತಪೀಠಕ್ಕೆ ಸುಮಾರು 30 ಸಾವಿರ ದತ್ತ ಮಾಲಾ ಧಾರಿಗಳನ್ನು ಕರೆಸಿಕೊಳ್ಳಲು ಸಂಘಟನೆಗಳು ಟೊಂಕ ಕಟ್ಟಿ ನಿಂತಿವೆ. ಇದಕ್ಕೆ ಪೂರ್ವಭಾವಿಯಾಗಿ ಪ್ರಮುಖ ನಗರ, ಪಟ್ಟಣ ಹಾಗೂ ಹೋಬಳಿ ಕೇಂದ್ರಗಳಲ್ಲಿ ಶೋಭಾಯಾತ್ರೆ ಹಮ್ಮಿಕೊಂಡಿದೆ. ಶುಕ್ರವಾರ ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಯಿತು.ಡಿ. 24 ರಂದು ಚಿಕ್ಕಮಗಳೂರಿನಲ್ಲಿ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ. ಡಿ. 25 ರಂದು ಶೋಭಾ ಯಾತ್ರೆ ನಡೆಯಲಿದ್ದು, ಡಿ. 26 ರಂದು ರಾಜ್ಯದ ವಿವಿಧೆಡೆಯಿಂದ ದತ್ತಭಕ್ತರು ದತ್ತಪೀಠಕ್ಕೆ ಆಗಮಿಸಲಿದ್ದಾರೆ. ದತ್ತ ಜಯಂತಿ ಉತ್ಸವದಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ.
ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಂದೋಬಸ್ತ್ ಕುರಿತು ಮಾಹಿತಿ, ಜಿಲ್ಲೆ ಯಾದ್ಯಂತ ಮೂರು ದಿನಗಳ ಕಾಲ ಬಂದೋಬಸ್ತ್‌ಗೆ ಸುಮಾರು 4 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದರ ಜತೆಗೆ 7 ಮಂದಿ ಎಎಸ್‌ಪಿ, 30 ಮಂದಿ ಡಿವೈಎಸ್ಪಿ, 60 ಮಂದಿ ಸಿಪಿಐ, ಗೃಹ ರಕ್ಷಕ ದಳ ಸಿಬ್ಬಂದಿ ಜತೆಗೆ ಡಿಎಆರ್ ಹಾಗೂ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ 24 ಕಡೆಗಳಲ್ಲಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಇಲ್ಲಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು, ಸಹಾಯಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಇರುತ್ತಾರೆ. ಸೂಕ್ಷ್ಮ ಸ್ಥಳಗಳು ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸುಮಾರು 300 ಸಿಸಿ ಟಿವಿ ಕ್ಯಾಮರಾಗಳು ಅಳವಡಿಸಲಾಗಿದೆ. ಕೆಲವು ಕಡೆಗಳಲ್ಲಿ ವಿಡಿಯೋ ರೇಕಾರ್ಡ್ ಮಾಡಿಕೊಳ್ಳಲು ಖಾಸಗಿ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗುವುದು. ಪೊಲೀಸ್ ಅಧಿಕಾರಿಗಳು ಬಾಡಿ ಕ್ಯಾಮರಾಗಳನ್ನು ಹೊಂದಿರುತ್ತಾರೆ ಎಂದರು.
ಮುಂಜಾಗ್ರತೆ: ಜಿಲ್ಲೆಯಲ್ಲಿ ಪ್ರತಿಕೂಲ ಹವಮಾನ ಇರುವುದರಿಂದ ಗಿರಿ ಪ್ರದೇಶದಲ್ಲಿ 45 ವರ್ಷ ದಾಟಿದ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳುತ್ತಿಲ್ಲ. ಗಿರಿಯಲ್ಲಿ ಎರಡು ವೈದ್ಯರ ತಂಡಗಳ ನಿಯೋಜನೆ ಮಾಡಲಾಗಿದೆ. ರಾಜ್ಯದ ವಿವಿಧೆಡೆ ಯಿಂದ ಭಕ್ತರು ಬರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.ಹಿಂದಿನ ವರ್ಷಗಳಲ್ಲಿ ಚಿಕ್ಕಮಗಳೂರು ನಗರದಲ್ಲಿ ಸಂಕೀರ್ತನಾ ಯಾತ್ರೆ ಹಾಗೂ ಶೋಭಾಯಾತ್ರೆ ಮುಗಿದ ಬಳಿಕ ಇಲ್ಲಿನ ಸಿಬ್ಬಂದಿಯನ್ನು ದತ್ತಪೀಠಕ್ಕೆ ನಿಯೋಜನೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಗಿರಿ ಪ್ರದೇಶದಲ್ಲಿಯೇ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದ ಜಿಲ್ಲಾ ರಕ್ಷಣಾಧಿಕಾರಿ, ಹಿಂದಿನ ವರ್ಷಗಳಲ್ಲಿ ದತ್ತಜಯಂತಿ ಬಂದೋಬಸ್ತ್‌ಗೆ ಹೊರ ಜಿಲ್ಲೆಗಳಿಂದ ಬಂದಿದ್ದ ಸಿಬ್ಬಂದಿಗಳನ್ನುಆದ್ಯತೆಯ ಮೇಲೆ ಈ ಬಾರಿಯೂ ಕರೆಸಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯದ ವಿವಿಧೆಡೆಯಿಂದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದಾರೆ. ಶನಿವಾರ ಮಧ್ಯಾಹ್ನದ ನಂತರ ಅವರನ್ನು ನಿಯೋಜನೆ ಮಾಡಲಾಗುವುದು. ಪೊಲೀಸರಿಗೆ ಊಟ ಮತ್ತು ವಸತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಗಿರಿ ಪ್ರದೇಶಕ್ಕೆ ಮೂರು ದಿನ ದತ್ತಭಕ್ತರು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರವಾಸಿಗರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು. ಹಾಗಾಗಿ ಈ ಭಾಗದಲ್ಲಿ ಪ್ರವಾಸಿಗರಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಆದರೆ, ಈ ಹಿಂದೆ ಹೋಂ ಸ್ಟೇ, ರೆಸಾರ್ಟ್ ಬುಕ್ ಮಾಡಿಕೊಂಡವರು ಹೋಗಿ ಬರುವುದರಲ್ಲಿ ಆಭ್ಯಂತರ ಇಲ್ಲ. ಆದರೆ, ಸದ್ಯ ಪ್ರವಾಸವನ್ನು ಮುಂದೂಡುವುದು ಒಳಿತು ಎಂದರು.22 ಕೆಸಿಕೆಎಂ 4
ದತ್ತಜಯಂತಿ ಹಿನ್ನಲೆಯಲ್ಲಿ ಚಿಕ್ಕಮಗಳೂರಿನಲ್ಲಿ ಶುಕ್ರವಾರ ಬೈಕ್ ಜಾಥಾ ನಡೆಯಿತು.---
22 ಕೆಸಿಕೆಎಂ 5ಎಸ್ಪಿ ಡಾ. ವಿಕ್ರಂ ಅಮಟೆ.