ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ ಮುಂಡಾ ಭರವಸೆ
ಕೊಬ್ಬರಿ ಬೆಳೆಗಾರರು ಹೆಚ್ಚು ಇರುವ ತುಮಕೂರು, ಹಾಸನ ಮುಂತಾದ ಕಡೆಗಳಲ್ಲಿ ನಫೆಡ್ ಖರೀದಿ ಕೇಂದ್ರಗಳನ್ನು ಹೊಸ ವರ್ಷದ ಜನವರಿ ತಿಂಗಳಲ್ಲಿಯೇ ತೆರೆದು ಕೊಬ್ಬರಿ ಖರೀದಿ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಅರ್ಜುನ ಮುಂಡಾ ಭರವಸೆ ನೀಡಿದ್ದಾರೆ.
ನವದೆಹಲಿಯಲ್ಲಿ ತಮ್ಮನ್ನು ಭೇಟಿ ಮಾಡಿದ ರಾಜ್ಯದ ನಿಯೋಗಕ್ಕೆ ಮುಂಡಾ ಅವರು ಈ ಭರವಸೆ ನೀಡಿದ್ದಾರೆ ಎಂದು ನಿಯೋಗದಲ್ಲಿ ಇದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರ ನೆರವಿನಿಂದ ಅರ್ಜುನ ಮುಂಡಾ ಅವರ ಜತೆಗಿನ ಈ ಭೇಟಿಯನ್ನು ನಿಗದಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ʻರಾಜ್ಯದಲ್ಲಿ ಬೆಲೆ ಕುಸಿತದಿಂದ ಕೊಬ್ಬರಿ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿರುವುದನ್ನು ಸಚಿವರ ಗಮನಕ್ಕೆ ಜಂಟಿ ಮನವಿ ಮೂಲಕ ತರಲಾಯಿತು. ಸಚಿವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಕೊಬ್ಬರಿ ಬೆಳೆಗಾರರಿಗೆ ಸಾಧ್ಯವಾದಷ್ಟು ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದರುʼ ಎಂದು ಸುರೇಶ್ ಗೌಡರು ತಿಳಿಸಿದ್ದಾರೆ.
ʻಈಗಾಗಲೇ ಕೇಂದ್ರ ಸರ್ಕಾರವು ನಫೆಡ್ ಮೂಲಕ ಖರೀದಿ ಮಾಡಲು ಕ್ವಿಂಟಲ್ ಕೊಬ್ಬರಿಗೆ 11,750 ರು. ಬೆಂಬಲ ಬೆಲೆ ಘೋಷಿಸಿದೆ. ರಾಜ್ಯ ಸರ್ಕಾರವು 1,250 ರೂಪಾಯಿ ಬೆಂಬಲ ಬೆಲೆ ಮತ್ತು ಹೆಚ್ಚುವರಿಯಾಗಿ 250 ರು. ಗಳ ಪ್ರೋತ್ಸಾಹ ಧನ ಘೋಷಿಸಿದೆ. ಆದರೆ, ಖರೀದಿ ಕೇಂದ್ರಗಳನ್ನು ತೆರೆಯದೇ ಇರುವುದರಿಂದ ಸಮಸ್ಯೆಯಾಗಿದೆʼ ಎಂಬ ವಿಚಾರವನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಯಿತು ಎಂದು ತಿಳಿಸಿದ್ದಾರೆ.
ʻಬರ ಸ್ಥಿತಿಯಿಂದ ಕಂಗಾಲಾಗಿರುವ ರೈತರ ನೆರವಿಗೆ ಬರಬೇಕು ಮತ್ತು ತಕ್ಷಣದಲ್ಲಿಯೇ ಪರಿಹಾರ ಘೋಷಣೆ ಮಾಡಬೇಕುʼ ಎಂದು ಈಚೆಗೆ ಸುರೇಶ್ ಗೌಡರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.