ಕನ್ನಡಪ್ರಭ ವಾರ್ತೆ ಮೂಡುಬಿದಿರೆಮೂಡುಬಿದಿರೆ ಹಾಗೂ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಡಯಾಲಿಸಿಸ್ ಯಂತ್ರಗಳು ಹಾಗೂ ಟೆಕ್ನಿಷಿಯನ್‌ಗಳನ್ನು ಮುಂದಿನ ತಿಂಗಳೊಳಗೆ ಒದಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮುಂದಿನ ತಿಂಗಳಿನಿಂದ ತಾಲೂಕುವಾರು ಜನಸ್ಪಂದನ ಸಭೆ ನಡೆಸಿ ಸ್ಥಳೀಯವಾದ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಜನಸಾಮಾನ್ಯರು ಸಲ್ಲಿಸುವ ಅರ್ಜಿಗಳು ಕಾಲಮಿತಿಯೊಳಗೆ ಇತ್ಯರ್ಥಗೊಳ್ಳಲು ಇದು ಸಹಕಾರಿಯಾಗಲಿದೆ ಎಂದ ಅವರು, ಜನರಿಗೆ ನೇರ ತಲುಪುವ ಸರ್ಕಾರದ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದು, ಯುವನಿಧಿಯನ್ನು ಮುಂದಿನ ತಿಂಗಳಿನಿಂದ ಜಾರಿಗೊಳಿಸಲಾಗುವುದು ಎಂದರು.
ಶಾಸಕ ಉಮನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಪೇಟೆಯ ಹೃದಯಭಾಗದಲ್ಲಿ ಪುರಸಭೆ ಮಾರುಕಟ್ಟೆಯ ಕಾಮಗಾರಿ ಕಾನೂನು ತೊಡಕಿನಿಂದಾಗಿ ಅರ್ಧದಲ್ಲೇ ನಿಂತಿದೆ. ಇದರಿಂದ ವ್ಯಾಪಾರಿಗಳಿಗೆ ಮಾತ್ರವಲ್ಲ ಜನರಿಗೂ ತೊಂದರೆಯಾಗುತ್ತಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸಚಿವರ ಗಮನಕ್ಕೆ ತಂದರು. ಈ ಕುರಿತು ಪರಿಶೀಲಿಸಿ, ಮಾರುಕಟ್ಟೆ ನಿರ್ಮಾಣಕ್ಕೆ ಪೂರಕವಾದ ಪ್ರಯತ್ನಗಳನ್ನು ಮಾಡುವಂತೆ ಸಚಿವರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.
ಆಸ್ಪತ್ರೆಯ ಆರೋಗ್ಯ ವಿಚಾರಿಸದ ಆರೋಗ್ಯ ಸಚಿವರು!- ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಮೂಡುಬಿದಿರೆ ತಾಲೂಕಿಗೆ ಭೇಟಿ ನೀಡಿದರೂ ತೀವ್ರ ಅನಾರೋಗ್ಯದಲ್ಲಿರುವ ಇಲ್ಲಿನ ತಾಲೂಕು ಆಸ್ಪತ್ರೆಯತ್ತ ತಿರುಗಿಯೂ ನೋಡದೇ ಮರಳಿ ಹೋದದ್ದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
ಆಡಳಿತ, ಹಿರಿಯ ವೈದ್ಯಾಧಿಕಾರಿ ಸಹಿತ 53ರಲ್ಲಿ 31 ಹುದ್ದೆಗಳು ಖಾಲಿ ಬಿದ್ದು ಅಕ್ಷರಶಃ ನರಳುತ್ತಿರುವ ತಾಲೂಕು ಆಸ್ಪತ್ರೆಯ ಬಗ್ಗೆ ಆಳುವವರ ಗಮನ ಸೆಳೆಯಲಾಗಿದ್ದರೂ ಸಚಿವರು ಇತ್ತ ಮುಖ ಮಾಡಿಲ್ಲ.