- ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಿಂದೂ ಸಮ್ಮಿಲನದಲ್ಲಿ ಪ್ರಮೋದ್ ಮುತಾಲಿಕ್
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಚಿಕ್ಕಮಗಳೂರಿನ ದತ್ತ ಪೀಠ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ ಎಂದು ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ಶನಿವಾರ ರಾತ್ರಿ ಪಟ್ಟಣದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಂಕಿಮ್- ಹೆಡ್ಗೆವಾರ್ ವೇದಿಕೆಯಲ್ಲಿ ನಡೆದ ಹಿಂದೂ ಸಮ್ಮಿಲನದ ಕಾರ್ಯಕ್ರಮ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು. ದತ್ತಪೀಠದಲ್ಲಿ ಬಾಬಾ ಬುಡನ್ ದರ್ಗಾ ಇತ್ತು ಎಂಬುದಕ್ಕೆ ಯಾವುದೇ ಧಾಖಲೆ ಇಲ್ಲ. ದತ್ತ ಪೀಠದಿಂದ 15 ಕಿ.ಮೀ.ದೂರದಲ್ಲಿ ನಾಗೇನಹಳ್ಳಿ ಎಂಬ ಊರು ಇದ್ದು ಅಲ್ಲಿ 2 ಗೋರಿಗಳಿವೆ. ನಾಗೇನಹಳ್ಳಿಗೆ ಸೇರಿದ ಗ್ರಾಮ ಪಂಚಾಯಿತಿ ದಾಖಲೆಯಲ್ಲಿ ಬಾಬಾ ಬುಡನ್ ದರ್ಗಾ ಎಂದಿದೆ.ಆದರೆ, ರಾಜಕಾರಣಿಗಳು ಮೂಗು ತೂರಿಸಿ ದತ್ತ ಪೀಠವನ್ನು ಸೌಹಾರ್ದ ಪೀಠವನ್ನು ಮಾಡಲು ಹೊರಟಿದ್ದಾರೆ. ಓಟಿಗಾಗಿ ರಾಜಕಾರಣಿಗಳು ಹಿಂದೂ -ಮುಸ್ಲಿಂರ ನಡುವ ಬೆಂಕಿ ಹಚ್ಚುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕಳೆದ 30 ವರ್ಷದಿಂದಲೂ ದತ್ತಪೀಠಕ್ಕೆ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ದತ್ತ ಪೀಠದಲ್ಲಿ ಸಾವಿರಾರು ವರ್ಷದ ಹಿಂದೆಯೇ ಗುರು ದತ್ತಾತ್ರೇಯರು ತಪಸ್ಸು ಮಾಡಿದ ಕ್ಷೇತ್ರವಾಗಿದೆ. ಅತ್ರೇಯ ಆಶ್ರಮವಿದೆ. ದತ್ತಾತ್ರೇಯ ಪಾದುಕೆ, ಕಮಂಡಲವನ್ನು ಈಗಲೂ ಅಲ್ಲಿ ಕಾಣಬಹುದು. ಮೈಸೂರು ಮಹಾರಾಜ ಜಯಚಾಮರಾಜ ಒಡೆಯರ್ ದತ್ತ ಪೀಠಕ್ಕೆ ಭೇಟಿ ನೀಡುತ್ತಿದ್ದರು. ಮಕ್ಕಳಿಲ್ಲದವರು ಈ ಪೀಠಕ್ಕೆ ಭೇಟಿ ನೀಡಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಇದೆ. ದತ್ತ ಪೀಠ ಹೋರಾಟದಲ್ಲಿ ವಿಶ್ವ ಹಿಂದೂಪರಿಷತ್, ಬಜರಂಗದಳದ ಕಾರ್ಯಕರ್ತರು ಜೈಲು ವಾಸ ಅನುಭವಿಸಿದ್ದಾರೆ. ಈಗ ಶೇ. 90 ರಷ್ಟು ಹೋರಾಟ ಮುಗಿದಿದೆ.ಉಳಿದ 10 ಭಾಗ ಹೋರಾಟ ಮಾಡಿ ದತ್ತ ಪೀಠದ ಮೇಲೆ ಕೇಸರಿ ಬಾವುಟ ಹಾರಿಸಲಾ ಗುವುದು ಎಂದು ಘೋಷಿಸಿದರು.ಶ್ರೀನಗರದ ಪಹಲ್ಗಾಂ ನಲ್ಲಿ ಭಯೋತ್ಪಾದರು ಧರ್ಮ ಕೇಳಿ ಗುಂಡು ಹೊಡೆದು ಹಿಂದೂಗಳನ್ನು ಸಾಯಿಸಿದ್ದಾರೆ. ಕಾಶ್ಮೀರ ದಲ್ಲಿ 7 ಲಕ್ಷ ಜನ ಹಿಂದೂಗಳನ್ನು ಓಡಿಸಿದ್ದಾರೆ.1 ಲಕ್ಷ ಜನ ಹಿಂದೂಗಳನ್ನು ಸಾಯಿಸಿದ್ದಾರೆ. ಎಲ್ಲೇ ಹಿಂದೂಗಳಿಗೆ ಅವಮಾನ ಆದರೂ ಎಲ್ಲಾ ಹಿಂದೂಗಳು ಒಗ್ಗಟ್ಟಾಗಿ ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಚಿಕ್ಕಮಗಳೂರಿನಲ್ಲಿ 6 ಸಾವಿರ ಎಕರೆ ದತ್ತಪೀಠದ ಹೆಸರಿನಲ್ಲಿದೆ. ವಿಶ್ವ ಹಿಂದೂ ಪರಿಷತ್, ಬಜರಂಗದಳದ ಹೋರಾಟದ ಫಲವಾಗಿ ಈಗ ದತ್ತ ಪೀಠದಲ್ಲಿ ತ್ರಿಕಾಲ ಪೂಜೆ ನಡೆಯುತ್ತಿದೆ. ಅರ್ಚಕರಿಂದ ಧೈರ್ಯವಾಗಿ ಪ್ರಸಾದ ತೆಗೆದುಕೊಳ್ಳಬಹುದು. ಡಾ.ಕೇಶವಬಲರಾಂ ಹೆಡ್ಗೆವಾರ್ ಹಿಂದೂಗಳಿಗೆ ದೇಶ ಭಕ್ತಿ ಕಲಿಸಿದರು. ನಮ್ಮ ದೇಶದ ಸಂಸ್ಕಾರ ನಮಗೆ ಹೆಮ್ಮೆ ಇದೆ. ದತ್ತ ಪೀಠ ಮುಕ್ತಿ ಮಾಡಲು ಡಿ. 4 ರಂದು ಪ್ರತಿಯೊಬ್ಬ ಹಿಂದೂಗಳು ದತ್ತ ಪೀಠಕ್ಕೆ ಬನ್ನಿ ಎಂದು ಕರೆ ನೀಡಿದರು.ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಕೋಣನಕೆರೆ ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮದನಗೌಡ, ಹಿಂದೂ ಪರಿವಾರದ ಮುಖಂಡರಾದ ಗಡಿಗೇಶ್ವರ ಅಭಿಷೇಕ್, ಅರುಣಜೈನ್, ವರ್ಕಾಟೆ ಧನಂಜಯ, ದರ್ಶನ್, ಅರಳಿಕೊಪ್ಪ ಪ್ರತಾಪ್, ಸಾರ್ಯ ಚೇತನ್ , ಅಳೇ ಹಳ್ಳಿ ಮಧುಶೆಟ್ಟಿ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ಪುರೋಹಿತ ಚಂದ್ರಶೇಖರ ಐತಾಳ್ ಅವರನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಬಜರಂಗದಳ, ವಿಶ್ವ ಹಿಂದೂಪರಿಷತ್ ಹಮ್ಮಿಕೊಂಡಿದ್ದ ಶೋಭಾ ಯಾತ್ರೆಗೆ ಬಸ್ತಿಮಠದಲ್ಲಿ ಪೀಠಾಧಿಪತಿ ಶ್ರೀ ಲಕ್ಷ್ಮೀಸೇನ ಭಟ್ಟಾರಕಸ್ವಾಮೀಜಿಗಳು ಚಾಲನೆ ನೀಡಿದರು. ಬಸ್ತಿಮಠದಿಂದ ಹೊರಟ ಶೋಭಾ ಯಾತ್ರೆ ಪ್ರವಾಸಿ ಮಂದಿರ ತಲುಪಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿತು. ಶೋಭಾ ಯಾತ್ರೆಯಲ್ಲಿ ದತ್ತ ವಿಗ್ರಹ ಹೊತ್ತ ವಾಹನ, ಉಡುಪಿ ಮಕ್ಕಳ ಕಲಾ ತಂಡದವರಿಂದ ಭಜನೆ, ನೃತ್ಯ ನಡೆಯಿತು.ಬೆಳಿಗ್ಗೆ ಪೇಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದತ್ತ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.