ಧಾರ್ಮಿಕ ಕಾರ್ಯಕ್ರಮಗಳ ಅನುಮತಿಗೆ ಕೋರಿಕೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಈ ಬಾರಿ ಇದೇ ಅ. 30 ರಿಂದ ನ. 5 ರವರೆಗೆ ಶ್ರೀರಾಮ ಸೇನೆಯ ನೇತೃತ್ವದಲ್ಲಿ ದತ್ತಮಾಲಾ ಅಭಿಯಾನ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಶ್ರೀರಾಮ ಸೇನೆ ಮುಖಂಡರು ಅಪರ ಜಿಲ್ಲಾಧಿಕಾರಿ ನಾರಾಯಣ ರೆಡ್ಡಿ ಕನಕ ರೆಡ್ಡಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಶ್ರೀ ರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ದತ್ತಾತ್ರೇಯ ಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಮಾಡಿ ಶ್ರೀ ಗುರು ದತ್ತಾತ್ರೇಯ ಹೋಮ, ಪೂಜೆ ಹಾಗೂ ಸಾಧು ಸಂತರ ಸಾನಿಧ್ಯದಲ್ಲಿ ಧಾರ್ಮಿಕ ಸಭೆ, ಪ್ರಸಾದ ವಿನಿಯೋಗ ನಡೆಸಲಾಗುವುದು. ಆದ್ದರಿಂದ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ಕೊಡುವಂತೆ ಮನವಿ ಮಾಡಿದ್ದಾರೆ. ಹಿಂದೂಗಳ ಪವಿತ್ರ ಯಾತ್ರ ಕೇಂದ್ರಗಳಲ್ಲಿ ಒಂದಾಗಿರುವ ದತ್ತಪೀಠವನ್ನು ಇಸ್ಲಾಮಿಕರಣದಿಂದ ವಿಮುಕ್ತ ಗೊಳಿಸಿ ಹಿಂದೂಗಳ ಪವಿತ್ರ ಯಾತ್ರಾ ಕೇಂದ್ರವಾಗಿಸಲು ಕೈಗೊಂಡಿರುವ ಹೋರಾಟದ ಭಾಗವಾಗಿ ಕಳೆದ 20 ವರ್ಷಗಳಿಂದ ಶ್ರೀರಾಮ ಸೇನೆ ದತ್ತಮಾಲೆ ಅಭಿಯಾನದ ಮೂಲಕ ಅವಿರತ ಹೋರಾಟ ನಡೆಸುತ್ತಿದೆ ಎಂದಿದ್ದಾರೆ. ದತ್ತಪೀಠ ವಿವಾದವನ್ನು ರಾಜ್ಯ ಸರ್ಕಾರವೇ ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷಕ್ಕೆ ಸೂಚನೆ ನೀಡಿದ್ದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ದತ್ತಪೀಠದಲ್ಲಿರುವ ಗೋರಿ ಗಳನ್ನು ಅಲ್ಲಿಂದ 14 ಕಿ.ಮೀ. ದೂರದ ನಾಗೇನಹಳ್ಳಿ ಬಾಬಾ ಬುಡನ್ ದರ್ಗಾಕ್ಕೆ ಸ್ಥಳಾಂತರಿಸಿ ದತ್ತ ಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಮನವಿ ಸಲ್ಲಿಸಿದ ಸಂದರ್ಭದಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜ್ಞಾನೇಂದ್ರ ಜೈನ್, ವಿಭಾಗಾಧ್ಯಕ್ಷ ರಂಜಿತ್ ಶೆಟ್ಟಿ, ಜಿಲ್ಲಾ ಗೌರವ ಅಧ್ಯಕ್ಷ ಅನಿಲ್ ಆನಂದ್, ಸಮಸ್ತ ವಿಶ್ವಧರ್ಮ ರಕ್ಷ ಸೇವಾ ಸಂಸ್ಥಾನದ ಯೋಗೀಶ್ ಸಂಜಿತ್ ಸುವರ್ಣ, ದತ್ತಾಶ್ರಮ ಅರ್ಚಕ ರಾಜೇಂದ್ರ ಕುಮಾರ್, ಜಿಲ್ಲಾ ದುರ್ಗಾ ಸೇನೆ ಅಧ್ಯಕ್ಷೆ ನವೀನ್ ರಂಜಿತ್, ಆಟೋ ಸೇನೆ ಜಿಲ್ಲಾಧ್ಯಕ್ಷ ವೆಂಕಟೇಶ್, ತಾಲೂಕು ಅಧ್ಯಕ್ಷ ನಂದನ್ ಹಾಜರಿದ್ದರು. 9 ಕೆಸಿಕೆಎಂ 5 ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶ್ರೀರಾಮ ಸೇನೆಯ ಮುಖಂಡರು ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ ಅವರು ಸೋಮವಾರ ಮನವಿ ಸಲ್ಲಿಸಿದರು.