ರಾಷ್ಟ್ರಮಟ್ಟದ ಮಹಿಳೆಯರ ಯೋಗಾಸನ ಚಾಂಪಿಯನ್ ಶಿಪ್- 2023 ಉದ್ಘಾಟನೆಯಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಅಭಿಮತ
ಕನ್ನಡಪ್ರಭ ವಾರ್ತೆ ದಾವಣಗೆರೆಯೋಗದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಪ್ತರ್ಷಿ ಯೋಗಧಾರ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಭಾನುವಾರ ದೇವರಾಜ ಅರಸು ಬಡಾವಣೆಯ ಶಿವಪಾರ್ವತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಪ್ರಥಮ ಬಾರಿಗೆ ರಾಷ್ಟ್ರ ಮಟ್ಟದ ಮಹಿಳೆಯರ ಯೋಗಾಸನ ಚಾಂಪಿಯನ್ ಶಿಪ್- 2023 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಯೋಗ ಇಡೀ ವಿಶ್ವಕ್ಕೆ ನೀಡಿರುವ ಅತ್ಯಮೂಲ್ಯ ಕೊಡುಗೆ. ಯೋಗಕ್ಕೆ ಯಾವುದೇ ವಯೋಮಾನದ ಮಿತಿ ಇರುವುದಿಲ್ಲ. ಯಾವುದೇ ವಯಸ್ಸಿನಲ್ಲಾದರೂ ಯೋಗ ಕಲಿತು ಮಾಡಬಹುದು. ಯೋಗ ಅಭ್ಯಾಸದಿಂದ ಮನಸ್ಸಿನ ಏಕಾಗ್ರತೆ ದೊರೆಯುತ್ತದೆ. ಮಕ್ಕಳು ಹೆಚ್ಚು ಕಲಿಯಲು ಯೋಗ ಹೆಚ್ಚು ಅನುಕೂಲಕಾರಿ ಎಂದು ತಿಳಿಸಿದರು.ಮಹಿಳೆಯರು ಸದಾ ಬೇರೆಯವರಿಗಾಗಿ ದುಡಿಯುವಂತಹವರು. ಅಂತಹ ಸಂದರ್ಭದಲ್ಲಿ ಮಹಿಳೆಯರು ತಮಗಾಗಿ ಒಂದಷ್ಟು ಸಮಯವನ್ನ ಯೋಗಕ್ಕೆ ಮೀಸಲಿಡಲು, ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಆಯೋಜಕರು ಮಾಡಿಕೊಟ್ಟಿದ್ದಾರೆ. ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಎಂದು ತಿಳಿಸಿದರು.
ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ. ಅದು ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ಕ್ಷಣವೂ ಮಹಿಳೆಯರ ಸಬಲೀಕರಣ, ಸಶ್ಯಕ್ತರನ್ನಾಗಿ ಮಾಡುವುದು ಅತೀ ಮುಖ್ಯ ಎಂದು ತಿಳಿಸಿದರು.ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಲೀಲಾಜೀ ಮಾತನಾಡಿ, ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೂಲ. ಮನಸ್ಸಿನ ನಿಯಂತ್ರಣ ಸಾಧಿಸಲು ಯೋಗ ಬಹಳ ಸಹಕಾರಿ. ಯೋಗಾಸನ ಜೊತೆಗೆ ಒಳ್ಳೆಯ ನಡೆತ ಬೆಳೆಸಿಕೊಳ್ಳಬೇಕು. ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ, ಎರಡು ಜಡೆಗಳು ಒಂದು ಕಡೆ ಸೇರುವುದಿಲ್ಲ ಎಂಬ ಮಾತು ಕೇಳಿಬರುತ್ತದೆ. ಈಶ್ವರೀಯ ವಿದ್ಯಾಲಯ ಅದು ಸುಳ್ಳು ಎಂಬುದನ್ನು ಸಾಧಿಸಿ ತೋರಿಸುತ್ತಿದೆ. 15 ಸಾವಿರದಷ್ಟು ಸಮರ್ಪಿತ ಸಾಧಕಿಯರು ಒಟ್ಟಿಗೆ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಕಾರ್ಯಚಟುವಟಿಕೆಗಳ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎನ್.ಎಸ್. ಎಸ್. ಅನುಷ್ಠಾನ ಅಧಿಕಾರಿ ಡಾ. ಪೂರ್ಣಿಮಾ ಜೋಗಿ, ಅಂತಾರಾಷ್ಟ್ರೀಯ ಯೋಗ ತೀರ್ಪುಗಾರ್ತಿ ಸುಶ್ಮಿತಾ ರಾಯ್, ಡಾ. ಕೆ.ಜೈಮುನಿ, ಪರಶುರಾಮ್, ಉಮೇಶ್, ಡಾ. ಫ್ರಾನ್ಸಿಸ್ ಕ್ಸೇವಿಯರ್, ಎಂ.ಜಿ. ಶಶಿಕಲಾ ಇತರರಿದ್ದರು. ಶೈಲಜಾ ಸ್ವಾಗತಿಸಿದರು. ನಳಿನಿ ನಿರೂಪಿಸಿದರು. ಯೋಗದ ಜೊತೆಗೆ ಗುಣ, ಒಳ್ಳೆಯ ಚಾರಿತ್ರ್ಯ ಮುಖ್ಯ. ಪುರುಷರಿಗಿಂತಲೂ ಗುಣ, ಪ್ರಾಮಾಣಿಕತೆ, ಸತ್ಯದ ವಿಷಯದಲ್ಲಿ ಅವರಗಿಂತಲೂ ಹತ್ತು ಪಟ್ಟು ಮುಂದಿರುವುದು ಸಮಾನತೆ. ಪುರುಷರಂತೆ ನಾವೂ ಸಮಾನರು ಎಂದು ಪುರುಷರಂತೆ ಮದ್ಯ, ಧೂಮಪಾನ, ಅತ್ಯಾಧುನಿಕ ಬಟ್ಟೆಗಳನ್ನು ಧರಿಸುವುದಲ್ಲ. ಗುಣದ ಮೂಲಕ ಸಮಾನತೆಯ ಸಾಧಿಸಬೇಕು.ಬಿ.ಕೆ. ಲೀಲಾಜೀ, ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ
........