ಯಲಬುರ್ಗಾ: ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಸಕ ಬಸವರಾಜ ರಾಯರಡ್ಡಿ ಹೊಸದಾಗಿ ೧೨ ವಸತಿ ನಿಲಯ ಮಂಜೂರು ಮಾಡಿಸಿದ್ದಾರೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಕುಕನೂರು ತಾಲೂಕಾಧ್ಯಕ್ಷ ಸಂಗಮೇಶ ಗುತ್ತಿ ಹೇಳಿದರು.

ಪಟ್ಟಣದ ಬಯಲು ರಂಗಮಂದಿರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕ್ಷೇತ್ರಕ್ಕೆ ಪ್ರಸಕ್ತ ಸಾಲಿನಲ್ಲಿ ೧೨ ವಸತಿ ನಿಲಯ ಮಂಜೂರಾಗಿದ್ದು, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕಾಲಾವಧಿಯಲ್ಲಿ ಒಟ್ಟು ೫೫ ಹಾಸ್ಟೆಲ್‌ ಕಾರ್ಯ ನಿರ್ವಹಿಸುತ್ತಿದ್ದು, ಅವು ಸ್ವಂತ ಕಟ್ಟಡ ಕೂಡ ಹೊಂದಿವೆ. ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ₹೧೯೦೦ ಭರಿಸಲಾಗುತ್ತಿದ್ದು, ಪ್ರತಿವರ್ಷ ಒಟ್ಟು ₹ ೧೫.೪೨ ಕೋಟಿ ಖರ್ಚು ಮಾಡಲಾಗುತ್ತಿದೆ. ಒಟ್ಟು ೬೭೦೦ವಿದ್ಯಾರ್ಥಿಗಳು ಇದರ ಸೌಲಭ್ಯ ಪಡೆಯುತ್ತಿದ್ದಾರೆ.ಇಡೀ ರಾಜ್ಯದಲ್ಲಿ ಇಷ್ಟೊಂದು ವಸತಿ ಸೌಲಭ್ಯವಿರುವ ಕ್ಷೇತ್ರ ಎಲ್ಲಿಯೂ ಇಲ್ಲ.ರಾಯರಡ್ಡಿ ಇಚ್ಛಾಶಕ್ತಿಯಿಂದ ಈ ಕಾರ್ಯ ಮಾಡಲಾಗಿದೆ ಎಂದರು.

ನಾಲ್ಕು ದಶಕಗಳಿಂದ ಆಗದಷ್ಟು ಕೆಲಸ ಕೇವಲ ಎರಡೂವರೆ ವರ್ಷದಲ್ಲಿ ಆಗಿವೆ. ಬಡ ವಿದ್ಯಾರ್ಥಿಗಳ ಜೀವನದ ಆಶಾಕಿರಣವಾಗಿ ರಾಯರಡ್ಡಿ ಅವರು ೨೦೦೦ವಿದ್ಯಾರ್ಥಿಗಳಿಗೆ ವಸತಿ ನಿಲಯ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ‌‌. ಒಂದೇ ವರ್ಷದಲ್ಲಿ ೧೮ ವಸತಿ ನಿಲಯ ಮಂಜೂರು ಮಾಡಿಸಿದ್ದು, ಇದು ಐತಿಹಾಸಿಕ ದಾಖಲೆಯಾಗಿದೆ. ಮಂಜೂರಾದ ವಸತಿ ನಿಲಯಗಳಿಗೆ ಕಟ್ಟಡ ಮತ್ತು ಹುದ್ದೆ ಕೂಡ ಸೃಷ್ಟಿಸಲಾಗಿದೆ. ಇದು ಬಡ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ ಎಂದರು.

ಸಮಾಜ ಕಲ್ಯಾಣ ಮತ್ತು ಬಿಸಿಎಂ ಇಲಾಖೆಗಳ ವಸತಿ ನಿಲಯಗಳ ಸಂಖ್ಯೆ ಏರಿಕೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ತಳಕಲ್‌, ತಳಬಾಳ, ಪಿಜಿ ಸೆಂಟರ್‌, ಗುನ್ನಾಳ, ಬಿಎಸ್ಸಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು ಮಂಜೂರಾಗಿದ್ದು, ಇದರ ಲಾಭ ಪಡೆಯಲಿದ್ದಾರೆ ಎಂದರು.


ಗ್ಯಾರಂಟಿ ಅನುಷ್ಟಾನ ಸಮಿತಿ ಯಲಬುರ್ಗಾ ತಾಲೂಕಾಧ್ಯಕ್ಷ ಸುಧೀರ ಕೊರ್ಲಹಳ್ಳಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಕರ್ಯ ಸೇರಿದಂತೆ ಇತರೆ ಸೌಲಭ್ಯ ಕೊರತೆ ಕಾಡುತ್ತದೆ. ಇದನ್ನು ಮನಗಂಡು, ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಸದುದ್ದೇಶದಿಂದ ಶಾಸಕ ರಾಯರಡ್ಡಿ ವಸತಿ ನಿಲಯ ಮಂಜೂರು ಮಾಡಿಸಿದ್ದಾರೆ ಎಂದರು.ಕೊಪ್ಪಳ ವಿವಿ ಪ್ರಭಾರ ಕುಲಪತಿ ಡಾ. ಎಸ್.ವಿ.ಡಾಣಿ ಮಾತನಾಡಿ, ರಾಯರಡ್ಡಿ ಯಲಬುರ್ಗಾ ಕ್ಷೇತ್ರಕ್ಕೆ ಹೆಚ್ಚು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿದ್ದಾರೆ. ಉನ್ನತ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವ ಜತೆಗೆ ವಸತಿ ವ್ಯವಸ್ಥೆ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.

ತಹಸೀಲ್ದಾರ್ ಪ್ರಕಾಶ ನಾಶಿ ಮಾತನಾಡಿದರು.ಈ ಸಂದರ್ಭ ಕುಕನೂರು ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ತಾಪಂ ಇಒ ಸಂತೋಷ ಪಾಟೀಲ್, ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್, ತಳಕಲ್ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ವಿರೂಪಾಕ್ಷಪ್ಪ ಬಾಗೋಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಶಿಧರ ಸಕ್ರಿ, ಬಿಸಿಎಂ ಅಧಿಕಾರಿ ಶಿವಶಂಕರ ಕರಡಕಲ್, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ವೀರನಗೌಡ ಬಳೂಟಗಿ, ಡಾ. ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಹಂಪಯ್ಯಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಜಕ್ಕಲಿ, ಪುನೀತ ಕೊಪ್ಪಳ ಸೇರಿದಂತೆ ಮತ್ತಿತರರು ಇದ್ದರು.==

ಸಂಭ್ರಮಾಚರಣೆ:ಕ್ಷೇತ್ರದ ೨೦೦೦ ವಿದ್ಯಾರ್ಥಿಗಳಿಗೆ ಸರ್ಕಾರ ವಸತಿ ನಿಲಯ ಮಂಜೂರು ಮಾಡಿದ್ದು, ಕಾಂಗ್ರೆಸ್ ಮುಖಂಡರು,ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ಆಚರಿಸಿದರು. ಈ ವೇಳೆ ಪಿಜಿ ಸೆಂಟರ್, ಬಿಸ್ಸಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.