- ಮಾಜಿ ಸಚಿವ ಸಿ.ಟಿ. ರವಿ ಸೇರಿ ಸಂಘ ಪರಿವಾರದ ಮುಖಂಡರಿಂದ ಮಾಲಾಧಾರಣೆ । ಡಿ.24 ರಿಂದ ಮೂರು ದಿನ ಉತ್ಸವ
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಆಶ್ರಯದಲ್ಲಿ ನಡೆಯಲಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ಸಂಘಪರಿವಾರದ ಮುಖಂಡರು ಭಾನುವಾರ ಜಿಲ್ಲೆಯಾದ್ಯಂತ ದತ್ತಮಾಲೆ ಧರಿಸಿದರು.
ಮಾಜಿ ಸಚಿವ ಸಿ.ಟಿ. ರವಿ, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಚಾಲಕ ರಘು ಸಕಲೇಶಪುರ ಸೇರಿದಂತೆ ವಿಶ್ವಹಿಂದೂ ಪರಿಷತ್, ಭಜರಂಗದಳ ಮುಖಂಡರು ಹಾಗೂ ಕಾರ್ಯಕರ್ತರು ಮಾಲೆಯನ್ನು ಧರಿಸಿದರು.ನಗರದ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ಅರ್ಚಕರಾದ ರಘುನಾಥ ಅವದಾನಿ, ರಾಘವೇಂದ್ರ, ಚಂದ್ರ ಶೇಖರ್ ಅವರ ನೇತೃತ್ವದಲ್ಲಿ ಗಣಪತಿ, ದತ್ತಾತ್ರೇಯ ಹೋಮ ಹಾಗೂ ವಿಶೇಷ ಪೂಜೆ ನಂತರ ಜಿಲ್ಲೆಯ ಹಲವೆಡೆಯಿಂದ ಆಗಮಿಸಿದ ದತ್ತಭಕ್ತರು ದತ್ತಾತ್ರೇಯ ಸ್ತೋತ್ರ ಹಾಗೂ ಭಜನೆ ಮಾಡುತ್ತಾ ಕೇಸರಿ ಶಾಲು ಧರಿಸಿ ಮಾಲೆಧಾರಣೆ ಮಾಡಿದರು. ವಿಶ್ವಹಿಂದೂ ಪರಿಷತ್ ಮುಖಂಡರಾದ ಆರ್.ಡಿ. ಮಹೇಂದ್ರ, ರಂಗನಾಥ್, ಯೋಗೀಶ್ ರಾಜ್ ಅರಸ್, ಸಿ.ಡಿ. ಶಿವಕುಮಾರ್, ಶಶಾಂಕ್, ಶರತ್ ಸೇರಿದಂತೆ ಹಲವು ಮಂದಿ ದತ್ತಮಾಲೆಯನ್ನು ಧರಿಸಿದರು.
----- ಬಾಕ್ಸ್ ------
ಚಿಕ್ಕಮಗಳೂರು: ಈ ಹಿಂದೆ ದತ್ತಾತ್ರೇಯ ಹೆಸರಿನಲ್ಲಿದ್ದ ಜಮೀನು ವಶಕ್ಕೆ ತೆಗೆದುಕೊಳ್ಳಬೇಕು, ಈ ಅಕ್ರಮದಲ್ಲಿರುವ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಪ್ರಭಾವಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಭೂ ಒಡೆತನದ ಹಕ್ಕು ಕಾಯ್ದೆ ಜಾರಿಗೆ ಬರುವ ಮೊದಲು 1861 ಎಕರೆ ಭೂಮಿ ದತ್ತಾತ್ರೇಯ ಹೆಸರಿನಲ್ಲಿತ್ತು. ಇದನ್ನು ನಾವು ಹೇಳತ್ತಿರೋದಲ್ಲ, ಕಂದಾಯ ಇಲಾಖೆಗಳ ದಾಖಲೆಗಳು ಹೇಳುತ್ತಿವೆ. ದತ್ತಪೀಠಕ್ಕೆ ಸೇರಿರುವ ಸ್ಥಿರ ಮತ್ತು ಚರ ಆಸ್ತಿ ಅಕ್ರಮವಾಗಿ ಪರಭಾರೆಯಾಗಿದೆ ಎಂದರು.
ಕಂದಾಯ ಇಲಾಖೆ ರಾಜ್ಯಮಟ್ಟದ ಅಧಿಕಾರಿಗಳು ತನಿಖೆ ನಡೆಸಲು ಈಗಾಗಲೇ ಸರ್ಕಾರ ಸೂಚನೆ ಕೊಟ್ಟಿದೆ. ಆ ಸಮಿತಿ ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಬೇಕು ಮತ್ತು ದಾಖಲೆ ಪರಿಶೀಲಿಸಬೇಕು ಎಂದು ಹೇಳಿದರು.
ಕಳೆದ ವರ್ಷ ಯಾವ ರೀತಿಯಲ್ಲಿ ಪದ್ಧತಿ ನಡೆದುಕೊಂಡು ಬಂದಿತ್ತೋ ಅದೆಲ್ಲವನ್ನು ಮುಂದುವರೆಸಲು ಪೂರ್ಣ ಪ್ರಮಾಣದ ಸಹಕಾರ ನೀಡುತ್ತೇವೆಂದು ಜಿಲ್ಲಾಡಳಿತ ಹೇಳಿದೆ ಎಂದರು.
ದತ್ತಜಯಂತಿ ಹಿನ್ನಲೆಯಲ್ಲಿ ಮಾಜಿ ಸಚಿವ ಸಿ.ಟಿ. ರವಿ ಹಾಗೂ ಸಂಘಪರಿವಾರದ ಮುಖಂಡರು ಮತ್ತು ಕಾರ್ಯಕರ್ತರು ಭಾನುವಾರ ಚಿಕ್ಕಮಗಳೂರಿನ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಮಾಲೆ ಧರಿಸಿದರು.