ಶ್ರೀರಾಮನ ಸ್ಮರಣೆಯಲ್ಲಿ ದಾವಣಗೆರೆ ಕೇಸರಿಮಯ

KannadaprabhaNewsNetwork | Published : Jan 20, 2024 2:00 AM

ಸಾರಾಂಶ

ನಗರ, ಜಿಲ್ಲಾದ್ಯಂತ ರಾಮ ನಾಮ ಸ್ಮರಣೆ ಶುರುವಾಗಿದೆ. ಜಿಲ್ಲಾ ಕೇಂದ್ರದಲ್ಲಂತೂ ಶ್ರೀರಾಮನ ಫ್ಲೆಕ್ಸ್ ಗಳು, ಭಗವಾಧ್ವಜಗಳು ರಾರಾಜಿಸುತ್ತಿದ್ದು, ವಿವಿಧ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ ತೋರಣಗಳು ಜನರ ಗಮನ ಸೆಳೆಯುತ್ತಿದೆ.

ಪ್ರಾಣ ಪ್ರತಿಷ್ಠಾಪನೆ, ಮಂದಿರ ಉದ್ಘಾಟನೆ ಹಿನ್ನೆಲೆ ರಾಷ್ಟ್ರೋತ್ಥಾನ ಮಕ್ಕಳಿಂದ ಮೂಡಿದ ಜೈಶ್ರೀರಾಮ ನಾಮ

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ಉದ್ಘಾಟನೆ ಹಾಗೂ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರ, ಜಿಲ್ಲಾದ್ಯಂತ ಕೇಸರಿ ಧ್ವಜಗಳು, ಭಗವಾಧ್ವಜಗಳು, ಬಿಲ್ಲುದಾರಿ ಶ್ರೀರಾಮ, ಆಂಜನೇಯ, ಅಯೋಧ್ಯೆ ಮಂದಿರವನ್ನು ಒಳಗೊಂಡ ಫ್ಲೆಕ್ಸ್ ಗಳು ಎಲ್ಲೆಡೆ ರಾರಾಜಿಸುತ್ತಿದ್ದು, ಜಿಲ್ಲಾ ಕೇಂದ್ರದ ವೃತ್ತಗಳು, ರಸ್ತೆಗಳು ಕೇಸರಿಮಯವಾಗುತ್ತಿವೆ.

ನಗರ, ಜಿಲ್ಲಾದ್ಯಂತ ರಾಮ ನಾಮ ಸ್ಮರಣೆ ಶುರುವಾಗಿದೆ. ಜಿಲ್ಲಾ ಕೇಂದ್ರದಲ್ಲಂತೂ ಶ್ರೀರಾಮನ ಫ್ಲೆಕ್ಸ್ ಗಳು, ಭಗವಾಧ್ವಜಗಳು ರಾರಾಜಿಸುತ್ತಿದ್ದು, ವಿವಿಧ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಕೇಸರಿ ತೋರಣಗಳು ಜನರ ಗಮನ ಸೆಳೆಯುತ್ತಿದೆ. ಅಲ್ಲಲ್ಲಿ ಎಲ್‌ಇಡಿ ಪರದೆ ಮೂಲಕ ಮಂದಿರ ಉದ್ಘಾಟನೆ ಸಮಾರಂಭದ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ.

ಇಲ್ಲಿನ ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಹಳೆ ಹೆರಿಗೆ ಆಸ್ಪತ್ರೆ, ಕೆಆರ್ ಮಾರುಕಟ್ಟೆ, ಶಾಂತಲಾ ಸಿಲ್ಕ್ಸ್, ಶ್ರೀ ಜಯದೇವ ವೃತ್ತ ಹೀಗೆ ನಗರದ ಪ್ರತಿ ವೃತ್ತ ರಸ್ತೆಗಳು ರಾಮನಾಮಮಯವಾಗುತ್ತಿದೆ. ದೊಡ್ಡ ಫ್ಲೆಕ್ಸ್ ಗಳಲ್ಲಿ ಮರ್ಯಾದಾಪುರುಷೋತ್ತಮ ರಾಮ ಹಾಗೂ ಐದು ಶತಮಾನಗಳಿಂದಲೂ ಜನರು ಶಬರಿಯಂತೆ ಕಾದಿದ್ದ ಶ್ರೀರಾಮ ಮಂದಿರದ ಕನಸು ಸಾಕಾರಗೊಂಡ ಅಯೋಧ್ಯೆ ಮಂದಿರದ ಚಿತ್ರ ಕಣ್ಮನೆ ಸೆಳೆಯುತ್ತಿದೆ. ದಾರಿ ಹೋಹಕು ಫ್ಲೆಕ್ಸ್, ಬ್ಯಾನರ್‌ಗಳಿಗೆ ಕೈ ಮುಗಿಯುವ ಮೂಲಕ ರಾಮಭಕ್ತಿ ಸಮರ್ಪಿಸಿ, ಕೃತಾರ್ಥರಾಗುತ್ತಿದ್ದಾರೆ.

ಮಂಡಿಪೇಟೆ ಬಟ್ಟೆ ಅಂಗಡಿ ವರ್ತಕರು, ಹಣ್ಣಿನ ವರ್ತಕರು, ತರಕಾರಿ ವರ್ತಕರು, ಬಂಗಾರ ಅಂಗಡಿ ವರ್ತಕರು, ಹೂವಿನ ವರ್ತಕರು, ಫೈನಾನ್ಸ್ ಮಾಲೀಕರು ಸೇರಿ ರಾಮ ಮಂದಿರ ಉದ್ಘಾಟನೆ ದಿನದಂದು ಅನ್ನ ಸಂತರ್ಪಣೆ, ದೀಪೋತ್ಸವ, ಮೆರವಣಿಗೆ ಸೇರಿ ವೃತ್ತದ ಸಮೀಪದ ಶ್ರೀ ಕೋದಂಡ ರಾಮ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅದೇ ರೀತಿ ವಿನೋಬ ನಗರ, ಕೆಟಿಜೆ ನಗರ, ಕಾಯಿಪೇಟೆ, ಸ್ವಾಗೇರ ಪೇಟೆ, ಶಿವಾಜಿ ನಗರ, ವೀರ ಮದಕರಿ ನಾಯಕ ವೃತ್ತ, ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ವೃತ್ತ, ಬಂಬೂ ಬಜಾರ್ ಹೀಗೆ ನಗರಾದ್ಯಂತ ರಾಮ ಮಂದಿರ ಉದ್ಘಾಟನೆಗೆ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದೆ.

ಇಲ್ಲಿನ ಮಂಡಿಪೇಟೆಯಲ್ಲಿ ವರ್ತಕರಾದ ಕೆ.ಬಿ.ಪ್ರಕಾಶ, ಜಯಂತಿ ಲಾಲ್ ಜೈನ್, ಎಂ.ಎಲ್.ಜನಾರ್ದನ, ಎಸ್.ಎನ್.ಪ್ರಕಾಶ, ದೀಪಕ್ ಜೈನ್, ತೇಜಸ್ ಗುಜ್ಜರ್, ಶಾಂತಲಾ ಸಿಲ್ಕ್ಸ್‌ನ ಮಾಲೀಕ ಚಂಪಾಲಾಲ್ ಡಿಲೇರಿಯಾ, ಮಲ್ಲಿಕಾರ್ಜುನ, ಮಹೇಶಪ್ಪ, ವೀರೇಶ್ ಬಾಳೇಕಾಯಿ ಇತರರು ಇದ್ದರು. ಇತ್ತ ನಿಟುವಳ್ಳಿಯ ರಾಷ್ಟ್ರೋತ್ಥಾನ ಶಾಲೆಯಲ್ಲಿ ಮಕ್ಕಳು ಹಿಂದಿಯಲ್ಲಿ ಜೈ ಶ್ರೀರಾಮ್ ಎಂಬುದಾಗಿ ಒಬ್ಬರ ಹಿಂದೆ ಒಬ್ಬರು ಕುಳಿತು ರಾಮನಾಮ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

Share this article