ಕನ್ನಡಪ್ರಭ ವಾರ್ತೆ ದಾವಣಗೆರೆ
ಇಲ್ಲಿನ ಎಂಸಿಸಿ ಎ ಬ್ಲಾಕ್‌ನಲ್ಲಿರುವ ಓಂಕಾರ ಹುಚ್ಚನಾಗಲಿಂಗ ಸ್ವಾಮಿ ಅನಾಥಾಶ್ರಮ ಅನಧಿಕೃತವಾಗಿದ್ದು, ಆಶ್ರಮದಲ್ಲಿರುವ 25 ಜನ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿ, ಅವರಿಗೆ ಪುನರ್ವಸತಿ ಕಲ್ಪಿಸಿ, ಅನಧಿಕೃತ ಅನಾಥಾಶ್ರಮವನ್ನು ಮುಚ್ಚಿಸಬೇಕು ಎಂದು ಕರುನಾಡ ಸಮರ ಸೇನೆಯ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿಗೆ ಮನವಿ ಸಲ್ಲಿಸಿದರು.ಈ ವೇಳೆ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಐಗೂರು ಸುರೇಶ್ ಮಾತನಾಡಿ, ಈ ಅನಾಥಾಶ್ರಮವು ಅನಧಿಕೃತವಾಗಿದ್ದು, ಯಾವುದೇ ಇಲಾಖೆಯ ಅನುಮತಿಯನ್ನು ಪಡೆದಿಲ್ಲ. ಅನಾಥಾಶ್ರಮದ ಗೋಡೆಗಳು ಶಿಥಿಲಗೊಂಡಿದ್ದು, ಮೇಲ್ಚಾವಣಿ ಬೀಳುವ ಹಂತದಲ್ಲಿರುವುದರಿಂದ ಇಲ್ಲಿನ ಮಕ್ಕಳು ಜೀವ ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದರು.
ಇಲ್ಲಿನ ಮಕ್ಕಳಿಗೆ ಮೂಲಭೂತ ಸೌಕರ್ಯದ ಕೊರತೆ ಮತ್ತು ಇವರನ್ನು ಪಾಲನೆ ಮಾಡಲು ಯಾವುದೇ ಸಿಬ್ಬಂದಿ ಕೂಡಾ ಇರುವುದಿಲ್ಲ. ಅಲ್ಲದೇ ಈ ಅನಾಥಾಶ್ರಮದ ಕಟ್ಟಡದ ಮೂಲ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಮೂಲ ಮಾಲೀಕರ ಪರವಾಗಿಯೇ ತೀರ್ಪು ಬಂದಿದೆ. ಆಗ ಇಲ್ಲಿನ ಮಕ್ಕಳು ಯಾವ ಸಮಯದಲ್ಲಾದರೂ ಬೀದಿಗೆ ಬರಬಹುದು ಎಂದರು.ಈ ಎಲ್ಲಾ ಕಾರಣಗಳಿಂದ ಇಲ್ಲಿರುವ ಮಕ್ಕಳ ವಿದ್ಯಾಭ್ಯಾಸ ಕುಂಠಿತಗೊಂಡಿದ್ದು, ಈ ಕೂಡಲೇ ಅನಾಥಾಶ್ರಮದಲ್ಲಿರುವ ಮಕ್ಕಳನ್ನು ರಕ್ಷಿಸಿ, ಅವರಿಗೆ ಪುನರ್ವಸತಿ ಕಲ್ಪಿಸಿ, ಸದರಿ ಅನಧಿಕೃತ ಅನಾಥಾಶ್ರಮವನ್ನು ಮುಚ್ಚಿಸಬೇಕು ಎಂದು ತಿಳಿಸಿದರು.
ಮನವಿ ಸವೀಕರಿಸಿದ ಜಿಲ್ಲಾಧಿಕಾರಿಗಳು, ಈ ವಿಷಯ ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಇಲಾಖೆಯವರು ತಪಾಸಣೆ ನಡೆಸಿ ವರದಿ ಸಲ್ಲಿಸಿದ್ದಾರೆ. ದೂರು ನೀಡಿರುವ ಪ್ರಕಾರ ಅದು ಅನಧಿಕೃತ ಅನಾಥಾಶ್ರಮದ ಮೂಲಭೂತ ಸೌಕರ್ಯಗಳಿಲ್ಲ ಎನ್ನುವುದು ಗಮನಕಕೆ ಬಂದಿದೆ. ಒಂದೆರಡು ದಿನದಲ್ಲಿ ಅಲ್ಲಿರುವ ಮಕ್ಕಳನ್ನು ರಕ್ಷಿಸಿ, ಅವರಿಗೆ ಪುನರ್ವಸತಿ ಕಲ್ಪಿಸಿ ಅನಾಥಾಶ್ರಮವನ್ನು ಮುಚ್ಚುತ್ತೇವೆ? ಎಂದು ಭರವಸೆ ನೀಡಿದರು.ಈ ವೇಳೆ ಕರುನಾಡ ಸಮರ ಸೇನೆಯ ಪ್ರಧಾನ ಕಾರ್ಯದರ್ಶಿ ಅಣಬೇರು ಶಿವಕುಮಾರ್, ರಾಜ್ಯ ಕಾರ್ಯಾಧ್ಯಕ್ಷ ಯಡಿಹಳ್ಳ ಅಶೋಕ್, ನಗರ ಘಟಕದ ಅಧ್ಯಕ್ಷ ವಿಶ್ವನಾಥ್, ದಕ್ಷಿಣ ವಲಯದ ಅಧ್ಯಕ್ಷ ದರ್ಶನ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಉಚ್ಚಂಗಿದುರ್ಗ ಗಣೇಶ್, ಕಾನೂನು ಘಟಕದ ವಕೀಲರಾದ ರಂಗನಾಥ ಹಾಜರಿದ್ದರು.