ವರ್ಷಾಂತ್ಯದಲ್ಲಿ ದಾವಣಗೆರೆ-ಚಿತ್ರದುರ್ಗ ಜಿಲ್ಲಾ ಮಾದಿಗ ಸಮಾವೇಶ

KannadaprabhaNewsNetwork |  
Published : Aug 13, 2024, 12:49 AM ISTUpdated : Aug 13, 2024, 12:50 AM IST
12ಕೆಡಿವಿಜಿ9-ದಾವಣಗೆರೆಯಲ್ಲಿ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದಿಂದ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯ ಎಲ್.ಎಂ.ಎಚ್. ಸಾಗರ್ ಇತರರಿಗೆ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಾದಿಗ ಸಮುದಾಯವನ್ನು ನಿರ್ಲಕ್ಷಿಸುತ್ತಿರುವ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ ಅಥವಾ ಜನವರಿಯಲ್ಲಿ ಶೀಘ್ರವೇ ದಾವಣಗೆರೆ-ಚಿತ್ರದುರ್ಗ ಅವಳಿ ಜಿಲ್ಲೆಗಳನ್ನು ಒಳಗೊಂಡಂತೆ ಮಾದಿಗ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘ ಕಾರ್ಯದರ್ಶಿ, ಸಮಾಜದ ಹಿರಿಯ ಮುಖಂಡ ಬಿ.ಎಚ್.ವೀರಭದ್ರಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸಮುದಾಯ ಕಡೆಗಣಿಸಿದ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ: ಬಿ.ಎಚ್‌.ವೀರಭದ್ರಪ್ಪ ಹೇಳಿಕೆ

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾದಿಗ ಸಮುದಾಯವನ್ನು ನಿರ್ಲಕ್ಷಿಸುತ್ತಿರುವ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕಿದೆ. ಈ ನಿಟ್ಟಿನಲ್ಲಿ ಡಿಸೆಂಬರ್ ಅಥವಾ ಜನವರಿಯಲ್ಲಿ ಶೀಘ್ರವೇ ದಾವಣಗೆರೆ-ಚಿತ್ರದುರ್ಗ ಅವಳಿ ಜಿಲ್ಲೆಗಳನ್ನು ಒಳಗೊಂಡಂತೆ ಮಾದಿಗ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘ ಕಾರ್ಯದರ್ಶಿ, ಸಮಾಜದ ಹಿರಿಯ ಮುಖಂಡ ಬಿ.ಎಚ್.ವೀರಭದ್ರಪ್ಪ ಹೇಳಿದರು.

ನಗರದ ಪಿ.ಜೆ. ಬಡಾವಣೆಯ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘ, ಆದಿ ಕರ್ನಾಟಕ ವಿದ್ಯಾರ್ಥಿ ನಿಲಯ ಹಾಗೂ ಡಾ. ಬಿ.ಎಂ.ಟಿ. ಪಿಯು ಕಾಲೇಜಿನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಎಲ್ಲ ರಾಜಕೀಯ ಪಕ್ಷಗಳು ಮಾದಿಗ ಸಮುದಾಯವನ್ನು ಕಡೆಗಣಿಸುತ್ತಿವೆ. ಅಂತಹ ಪಕ್ಷಗಳಿಗೆ ಪಾಠ ಕಲ್ಪಿಸುವ ನಿಟ್ಟಿನಲ್ಲಿ ಅವಳಿ ಜಿಲ್ಲೆಗಳ ಮಾದಿಗ ಸಮಾವೇಶವು ನಮ್ಮ ಸಮುದಾಯದ ಶಕ್ತಿ ಪ್ರದರ್ಶಿಸಲಿದೆ ಎಂದರು.

ಆಮರಣಾಂತ ಉಪವಾಸ ಸತ್ಯಾಗ್ರಹ:

ಹರಿಜನ ಸಮುದಾಯದ ಸಂಘಟನೆಗೆ ಕೇಂದ್ರ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ ಸೇರಿದಂತೆ ಎಲ್ಲ ಜಾತಿಯ ಜನಪ್ರತಿನಿಧಿಗಳನ್ನು ಸಮಾವೇಶಕ್ಕೆ ಆಹ್ವಾನಿಸಲಾಗುವುದು. ಮಾದಿಗ ಸಮುದಾಯದ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಮುಂಬರುವ ದಿನಗಳಲ್ಲಿ ನಿಮಗೆ ಕಷ್ಟವಾಗಲಿದೆ. ಸಮುದಾಯಕ್ಕೆ ನಿವೇಶನ ನೀಡದಿದ್ದರೆ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಎದುರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿಯೂ ಎಚ್ಚರಿಸಿದರು.

ಶಾಸಕ, ಸಂಸದೆಗೂ ಒತ್ತಾಯ:

ದೂಡಾ ಅಧ್ಯಕ್ಷರಾದವರು ತಮ್ಮ ತಮ್ಮ ಜಾತಿಗಳಿಗೆ ನಿವೇಶನಗಳನ್ನು ಮಾಡಿಕೊಂಡಿದ್ದಾರೆ. ಆದರೆ, ಶೋಷಿತ ಸಮುದಾಯವಾದ ಹರಿಜನ ಸಮುದಾಯಕ್ಕೆ ಇದುವರೆಗೆ ನಿವೇಶನವನ್ನೇ ನೀಡದೇ ವಂಚಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹರಿಜನ ಸಮುದಾಯದ ಶಾಲೆಗಾಗಿ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ನಿವೇಶನ ಮಂಜೂರು ಮಾಡಬೇಕು. ನಮ್ಮ ನಾಯಕರಾದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರನ್ನೂ ಸಮಾಜದಿಂದ ಭೇಟಿ ಮಾಡಿ, ಒತ್ತಾಯಿಸಲಿದ್ದೇವೆ ಎಂದು ತಿಳಿಸಿದರು.

ಹರಿಜನರ ಮತಗಳು ಬೇಕು, ಹರಿಜನರ ಸಹಕಾರವೂ ಬೇಕು. ಆದರೆ, ಅದೇ ಹರಿಜನ ಸಮುದಾಯಕ್ಕೆ ಯಾವುದೇ ಸೌಲಭ್ಯಗಳು ಸರ್ಕಾರದಿಂದ ಸರಿಯಾಗಿ ಸಿಗುವುದಿಲ್ಲವೆಂದರೆ ಏನರ್ಥ? ಹರಿಜನರ ಮಕ್ಕಳು ಓದಲು ಜಾಗ ಕೊಡಲಿಲ್ಲ. ಹರಿಜನ ಮಕ್ಕಳ ಮದುವೆಗೆ ಅನುಕೂಲವಾಗಲೆಂದು ಸಮುದಾಯ ಭವನ ನಿರ್ಮಿಸುವುದಕ್ಕೂ ಜಾಗ ಒದಗಿಸಲಿಲ್ಲ. ಕಳೆದ 4 ದಶಕದಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಸ್ವಾರ್ಥದಿಂದ ಕೆಲಸ ಮಾಡಿದರೂ ಕಾಂಗ್ರೆಸ್‌ನವರು ಸ್ಪಂದನೆ ನೀಡಲಿಲ್ಲ. ಬಿಜೆಪಿಯವರೂ ನೀಡಲಿಲ್ಲ ಎಂದು ಉಭಯ ಪಕ್ಷಗಳ ವಿರುದ್ಧ ಬಿ.ಎಚ್. ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಸನ್ಮಾನಿತರಾದ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಮಾತನಾಡಿ, ಹರಿಜನ ಸಮುದಾಯದ ಶಾಲೆ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಕೇಳಿದ್ದೀರಿ. ಶೀಘ್ರವೇ ಸಿಎ ನಿವೇಶನಗಳ ಕುರಿತಂತೆ ಪ್ರಾಧಿಕಾರದ ಸಭೆ ನಡೆಸಲಾಗುವುದು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಜೊತೆಗೆ ಚರ್ಚಿಸಿ, ಸಿಎ ನಿವೇಶನ ಒದಗಿಸುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಪಾಲಿಕೆ ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ನಾಮನಿರ್ದೇಶಿತ ಸದಸ್ಯರಾದ ಎಲ್.ಎಂ.ಎಚ್‌. ಸಾಗರ್‌, ಭಾಸ್ಕರ ರೆಡ್ಡಿ, ಕಣ್ಣಾಳ್ ಅಂಜಿನಪ್ಪ, ಎಸ್.ರಾಜಣ್ಣ ಇತರರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ಬಿ.ಎಂ. ಈಶ್ವರಪ್ಪ ಗಾಂಧಿ ನಗರ, ರಾಕೇಶ, ಚಂದ್ರು ಡೋಲಿ, ಶುಭ ಮಂಗಳ, ಎಚ್.ಜೆ. ಮೈನುದ್ದೀನ್ ಇತರರು ಇದ್ದರು.

- - - -12ಕೆಡಿವಿಜಿ9:

ದಾವಣಗೆರೆಯಲ್ಲಿ ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದಿಂದ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯ ಎಲ್.ಎಂ.ಎಚ್. ಸಾಗರ್ ಇತರ ಗಣ್ಯರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ: ಎಂ.ಬಿ.ಪಾಟೀಲ್‌
ಖಮೇನಿ ಆತ್ಮಕ್ಕೆ ಶಾಂತಿ ದೊರೆಯಲಿ, ಅಮೆರಿಕ ದಾಳಿ ಖಂಡನಾರ್ಹ: ಸಿಎಂ