ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದ ಕೇಂದ್ರ ಸ್ಥಾನದಲ್ಲಿರುವ ದಾವಣಗೆರೆ ರಾಜಧಾನಿಯಾಗುವ ಅರ್ಹತೆ ಹೊಂದಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಅಂತಹದ್ದೊಂದು ಸುವರ್ಣಾವಕಾಶದಿಂದ ವಂಚಿತವಾದರೂ, ಸಾಹಿತ್ಯ, ರಂಗಭೂಮಿ, ವಿದ್ಯಾಕೇಂದ್ರವೂ ಆದ ಈ ಊರನ್ನು ಸಾಂಸ್ಕೃತಿಕ ರಾಜಧಾನಿಯಾಗಿಸಲು ಪ್ರಯತ್ನಿಸುವಂತೆ ಜನ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಜಿಲ್ಲೆಯ ಜನರಿಗೆ ಹಿರಿಯ ಸಾಹಿತಿ, ಪತ್ರಕರ್ತ ಜಿ.ಪಿ.ಬಸವರಾಜ ಕರೆ ನೀಡಿದರು.ನಗರದ ಕನ್ನಡ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕತೆಗಾರ್ತಿ ಬಿ.ಟಿ.ಜಾಹ್ನವಿಯವರ ಹೊಸ ಕಥಾ ಸಂಕಲನ ''''''''ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ'''''''' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ ದಾವಣಗೆರೆಗೆ ನಾಡಿನ ಎಲ್ಲಾ ದಿಕ್ಕಿನಿಂದಲೂ ಜನರು ಬರುತ್ತಾರೆ. ಆದರೆ, ರಾಜಕೀಯ ಇಚ್ಛಾಶಕ್ತಿಯಿಂದ್ದಂತಹ ಒಂದು ಅವಕಾಶವೂ ಕೈತಪ್ಪಿತು. ಕೈಗಾರಿಕಾ ನಗರ, ವಾಣಿಜ್ಯ ಕೇಂದ್ರವಾಗಿದ್ದ ದಾವಣಗೆರೆ ಈಗ ವಿದ್ಯಾಕೇಂದ್ರವಾಗಿ ಇಡೀ ದೇಶದ ಗಮನ ಸೆಳೆಯುತ್ತಿದೆ. ಇಲ್ಲಿ ಕನ್ನಡ ಭಾಷೆ ಸುಭದ್ರವಾಗಿದ್ದು, ಜನರು ಅಚ್ಚ ಕನ್ನಡ ಭಾಷೆ ಬಳಸುತ್ತಾರೆ. ಯಾವುದೇ ಭಾಷೆಗಳ ಪ್ರಭಾವಕ್ಕೊಳಗಾಗದೇ ನೈಜ, ಶುದ್ಧ ಕನ್ನಡವನ್ನು ಇಲ್ಲಿನ ಜನ ಮಾತನಾಡುತ್ತಾರೆ ಎಂದು ಶ್ಲಾಘಿಸಿದರು.
ರಾಜಕೀಯ ಒತ್ತಡ ತರುವ ರಾಜಕೀಯ ಶಕ್ತಿಯ ಕೊರತೆಯಿಂದಾಗಿಯೇ ರಾಜಧಾನಿ ಸ್ಥಾನಮಾನವೂ ಇಂತಹ ವಿದ್ಯಾನಗರಿಗೆ ಸಿಗಲಿಲ್ಲ. ಆದರೆ, ಸಾಂಸ್ಕೃತಿಕ ರಾಜಧಾನಿಯಾಗಿ ಆದರೂ ಘೋಷಣೆ ಮಾಡಬೇಕಾಗಿತ್ತು. ಅದೂ ಆಗಿಲ್ಲ. ಇನ್ನೂ ಕಾಲ ಮಿಂಚಿಲ್ಲ. ಸರ್ಕಾರದ ಮೇಲೆ ಇಲ್ಲಿನ ರಾಜಕಾರಣಿಗಳು, ಜನ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು, ಪ್ರಭಾವಿಗಳು ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ದಾವಣಗೆರೆಯನ್ನು ನಾಡಿನ ಸಾಂಸ್ಕೃತಿಕ ರಾಜಧಾನಿ ಮಾಡುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.ಇತ್ತೀಚೆಗೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ದಮನಿತ, ಅಲಕ್ಷಿತ, ಅಳಿವಿನ ಅಂಚಿನಲ್ಲಿರುವ ಸಮುದಾಯಗಳಿಗೂ ಸಹ ಶಿಕ್ಷಣ ಸಿಕ್ಕಿರುವುದರಿಂದ ಬರೆಯುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಸಾಹಿತ್ಯದಲ್ಲಿ ಸವಾಲಾಗಿರುವುದೆಂದರೆ ಕಾವ್ಯ. ಆದರೆ, ಅದೇ ಎಲ್ಲರಿಗೂ ಈಗ ಸುಲಭವಾಗಿದೆ. ಸಂಕೀರ್ಣ ಅನುಭವಗಳನ್ನು ಕಟ್ಟಿಕೊಡುವುದೇನಿದ್ದರೂ ಕಥೆಯಾಗಿದೆ. ಲೇಖಕಿ ಬಿ.ಟಿ.ಜಾಹ್ನವಿಯವರ ಪುಸ್ತಕ ಕುರಿತು ಪ್ರಸ್ತುತಿ ಮಾಡಿದ್ದು ಉತ್ತಮ ಪ್ರಯೋಗವಾಗಿದೆ. ಈ ಕಥೆ ಕೇಳಿದಾಗ ಹೆಚ್ಚು ಪ್ರಯೋಜನವಾಗುತ್ತದೆ. ಮುಖ್ಯವಾದ, ಹೊಸ ಪ್ರಯೋಗ ಇದು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ನಿವೃತ್ತರು, ವೃದ್ಧರು ಬರುತ್ತಾರೆ. ಆದರೆ, ಇಲ್ಲಿ ಹೊಸ ತಲೆಮಾರು ಬಂದಿದ್ದು ಖುಷಿ ತಂದಿದೆ ಎಂದು ಬಸವರಾಜ ಹರ್ಷ ವ್ಯಕ್ತಪಡಿಸಿದರು.
ಮಾನವ ಬಂಧುತ್ವ ವೇದಿಕೆ ಕರ್ನಾಟಕದ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಬಿ.ಟಿ.ಜಾಹ್ನವಿ, ಲೇಖಕ ಡಾ.ರವಿಕುಮಾರ ನೀಹ, ಲೇಖಕಿ, ವಿಮರ್ಶಕಿ ಸೌಮ್ಯಾ ಕೋಡೂರು ಇತರರಿದ್ದರು.ಡಿಜಿಟಲ್ ಮಾಧ್ಯಮಗಳಿಂದ ಓದುಗರ ಸ್ವರೂಪ ಬದಲು
ವಿಜ್ಞಾನ, ತಂತ್ರಜ್ಞಾನ ಯುಗದಲ್ಲಿ, ಡಿಜಿಟಲ್ ಕ್ರಾಂತಿಯ ಇಂದಿನ ದಿನಮಾನಗಳಲ್ಲೂ ಎಲ್ಲಾ ಕಡೆ ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಕೆಲವರು ಪುಸ್ತಕಗಳು ಬಿಡುಗಡೆಯಾದರೂ ಓದುವವರಿಲ್ಲ ಎನ್ನುತ್ತಾರೆ. ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮಗಳ ಆಗಮನದೊಂದಿಗೆ ಓದುಗರ ಸ್ವರೂಪವೂ ಸಾಕಷ್ಟು ಬದಲಾಗಿದೆ. ತೇಜಸ್ವಿ, ಕುವೆಂಪುರ ಪುಸ್ತಕ ಅಗಾಧವಾಗಿ ಖರ್ಚಾಗುತ್ತವೆ. ಹೊಸ ತಲೆಮಾರಿನ ಪೀಳಿಗೆ ಓದುತ್ತಿರುವುದು ಆಶಾದಾಯಕ ಸಂಗತಿ. ಏಕೆಂದರೆ ಓದುಗರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯು ಇಂತಹ ಲೇಖಕರಿಗೆ ಇದೆ. ಅದೇ ರೀತಿಯ ಪುಸ್ತಕಗಳನ್ನು ಎಲ್ಲಾ ವರ್ಗದ ಜನರು ಬಯಸುತ್ತಾರೆ ಎಂದು ಜಿ.ಪಿ.ಬಸವರಾಜ ತಿಳಿಸಿದರು.