ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಸಮುದಾಯದ ಮಹಮ್ಮದ್ ಜಬೀವುಲ್ಲಾ, ದಿವಂಗತ ಶಾಮನೂರು ಶಿವಶಂಕರಪ್ಪನವರ ನಿಧನದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ನಡೆಯುವ ಉಪಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡುವಂತೆ ನಮ್ಮ ಒಕ್ಕೊರಲ ಒತ್ತಾಯವಿದೆ ಎಂದರು.
ಮುಸ್ಲಿಂ ಸಮುದಾಯಕ್ಕೆ ದಾವಣಗೆರೆ ದಕ್ಷಿಣ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ. ದಕ್ಷಿಣಕ್ಕೆ ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಮುಸ್ಲಿಂ ಫಂಡ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಸಾದಿಕ್ ಪೈಲ್ವಾದ್, ಸೈಯದ್ ಖಾಲಿದ್ ಅಹಮ್ಮದ್‌ರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದ್ದು, ಮಸ್ಲಿಂ ಸಮುದಾಯಕ್ಕೆ ಉಪಚುನಾವಣೆಯಲ್ಲಿ ವರಿಷ್ಠರು ಅವಕಾಶ ಮಾಡಿಕೊಡಲಿ ಎಂದು ತಿಳಿಸಿದರು.ದಿವಂಗತ ಶಾಮನೂರು ಶಿವಶಂಕರಪ್ಪನವರು ಇದ್ದಿದ್ದರೆ ನಮ್ಮ ಸಮದಾಯಕ್ಕೆ ಟಿಕೆಟ್ ಕೇಳುತ್ತಿರಲಿಲ್ಲ. ಹಿರಿಯರಾದ ಶಾಮನೂರು ಸ್ಪರ್ಧೆ ಮಾಡುವ ಇಚ್ಛೆ ವ್ಯಕ್ತಪಡಿಸಿದಾಗ ನಮ್ಮ ಸಮುದಾಯ ಸ್ಪಂದಿಸಿತ್ತು. ಈಗ ನಮ್ಮ ಸಮುದಾಯಕ್ಕೂ ಅವಕಾಶ ಮಾಡಿಕೊಡುವ ಸಂದರ್ಭ ಬಂದಿದೆ. ಒಂದು ವೇಳೆ ಉಪ ಚುನಾವಣೆಗೆ ಮುಸ್ಲಿಂಸಮುದಾಯಕ್ಕೆ ಟಿಕೆಟ್ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಸಮಾಜದ ಸಭೆ ನಡೆಸಿ, ಸೂಕ್ತ ತೀರ್ಮಾನ ಕೈಗೊಂಡು, ಅದರಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಮುಸ್ಲಿಂ ಮುಖಂಡರಾದ ಅಬ್ದುಲ್ ಸತ್ತಾರ್ ಸಾಬ್, ನಿಸಾರ್ ಅಹಮ್ಮದ್, ತಮನ್ನಾ ರಫೀಕ್, ದಾದಾಪೀರ್ ಇತರರು ಇದ್ದರು.