ಕನ್ನಡಪ್ರಭ ವಾರ್ತೆ ದಾವಣಗೆರೆ
ಕರ್ನಾಟಕವಷ್ಟೇ ಅಲ್ಲದೇ, ಅನ್ಯ ರಾಜ್ಯಗಳಲ್ಲೂ ಕೇಸ್‌ಗಳು ಆಗಿರುವುದು, ಸಾವಿರಾರು ಕೋಟಿ ರು.ಗಳ ವಹಿವಾಟು ಆಗಿರುವುದರಿಂದ ಇಡೀ ಪ್ರಕರಣದ ತನಿಖೆಗೆ ಹೆಚ್ಚಿನ ನೈಪುಣ್ಯತೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮೇಲಾಧಿಕಾರಿಗಳ ಅನುಮತಿ ಪಡೆದು, ಸಿಐಡಿಗೆ ಹಸ್ತಾಂತರಿಸಿದ್ದೇವೆ ಎಂದು ಹೇಳಿದ್ದಾರೆ.
ಈಗ್ಗೆ 2 ತಿಂಗಳ ಹಿಂದೆ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ನಿರ್ಮಾಣ ವ್ಯವಹಾರ ನಡೆಸುವ ಪ್ರಮೋದ್ ಎಂಬ ವ್ಯಕ್ತಿ 52 ಲಕ್ಷ ರು. ಕಳೆದುಕೊಂಡ ಬಗ್ಗೆ ದೂರು ನೀಡಿದ್ದರು. ತನಿಖೆ ವೇಳೆ ದೂರುದಾರ ತನ್ನ ಖಾತೆಯಲ್ಲಿ ಹಣ ಅಕ್ರಮವಾಗಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದರು. ಸಿಇಎನ್ ಅಧಿಕಾರಿಗಳು ತನಿಖೆ ನಡೆಸಿದಾಗ ಪ್ರಮೋದ್ ಖಾತೆ ಮೂಲಕ 150 ಕೋಟಿ ರು. ವರ್ಗಾವಣೆಯಾಗಿರುವುದು ಕಂಡು ಬಂದಿತ್ತು.ಹಣ ಕಳೆದುಕೊಂಡಿರುವುದಾಗಿ ದೂರು ನೀಡಿದ್ದ ಪ್ರಮೋದನೇ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಮೋದ್ ಖಾತೆಗೆ ಬಂದಿದ್ದು ಅನಾಮಧೇಯರ ಹಣ ಎಂಬುದು ಪತ್ತೆಯಾಗಿತ್ತು. ತನಿಖೆಯ ಆಳಕ್ಕೆ ಇಳಿದಾಗ ಹಾಸನದ ಅರ್ಫಾತ್ ಪಾಷಾ ಹಾಗೂ ಗುಜರಾತ್ ನ ಅಹಮ್ಮದಾಬಾದ್ ಮೂಲದ ಸಂಜಯ್ ಕುಂದ್ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದರು. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದಾಗ ಕರೆಂಟ್ ಅಕೌಂಟ್‌ಗಳ ಮಾರಾಟ ದಂಧೆ ನಡೆಸುತ್ತಿದ್ದ ವಿಚಾರ ಬಯಲಾಗಿತ್ತು.
ಯಾವುದೇ ಉದ್ಯಮ, ಉದ್ಯೋಗ ಇಲ್ಲದಿದ್ದರೂ ಕರೆಂಟ್ ಅಕೌಂಟ್ ತೆರೆದು, ಅದರಲ್ಲಿ ಬಹುಕೋಟಿ ಹಣವನ್ನು ವಹಿವಾಟು ನಡೆಸುತ್ತಿದ್ದರು. ದುಬೈನಿಂದ ಕರೆಂಟ್ ಅಕೌಂಟ್‌ಗೆ ಕೋಟಿ ಕೋಟಿಗಟ್ಟಲೇ ಹಣ ಜಮಾ ಆಗುತ್ತಿತ್ತು. ಆನ್ ಲೈನ್ ಗೇಮ್, ಗ್ಯಾಂಬ್ಲಿಂಗ್, ಫೇಕ್ ಟ್ರೇಡಿಂಗ್ ಸೇರಿದಂತೆ ಇತರೆ ಹಣ ಅವುಗಳಲ್ಲಿ ಜಮಾ ಆಗುತ್ತಿತ್ತು. ತನ್ನ ಕರೆಂಟ್ ಖಾತೆಯನ್ನು ಬೇರೆವ್ಯಕ್ತಿಗಳಿಗೆ ದೂರುದಾರ ಪ್ರಮೋದ್ ಮಾರಾಟ ಮಾಡಿದ್ದ. ತನ್ನ ಖಾತೆಗೆ ಜಮಾ ಆದ ಹಣಕ್ಕೆ ಕಮೀಷನ್ ನೀಡಿಲ್ಲವೆಂಬುದು ದೂರುದಾರನ ಆಕ್ರೋಶಕ್ಕೆ ಕಾರಣವಾಗಿತ್ತು.
ಹಾಗಾಗಿ ತನ್ನ ಖಾತೆಯಲ್ಲಿ ಇದ್ದ ಹಣವನ್ನು ವಂಚಕರು ಕದ್ದಿದ್ದಾರೆಂಬುದಾಗಿ ತಾನೇ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು. ಪ್ರಮೋದನ ದೂರನ್ನು ಆದರಿಸಿ, ತನಿಖೆಯನ್ನು ಕೈಗೊಂಡಾಗ ಹಾಸನ ಜಿಲ್ಲೆ ಬೇಲೂರು ಮೂಲಕ ಅರ್ಫಾತ್ ಪಾಷಾನನ್ನು ಪತ್ತೆ ಮಾಡಿ, ಆತನನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೇ, ಅರ್ಫಾತ್ ಪಾಷಾ ಖಾತೆಯಲ್ಲಿದ್ದ 18 ಕೋಟಿ ರು. ಹಣವನ್ನು ಪೊಲೀಸರು ಫ್ರೀಜ್ ಮಾಡಿದ್ದರು.ಆದರೆ, ಎರಡು ತಿಂಗಳಲ್ಲಿ ಬೇರೆ ಬೇರೆ ಬ್ಯಾಂಕ್ ಖಾತೆಗಳಿಂದ 132 ಕೋಟಿ ರು. ಹಣವನ್ನು ವಿಥ್ ಡ್ರಾ ಮಾಡಿಕೊಂಡಿದ್ದ ವಿಚಾರ ತನಿಖೆ ವೇಳೆ ಗೊತ್ತಾಗಿತ್ತು. ಇದೇ 2 ತಿಂಗಳಲ್ಲಿ ಬ್ಯಾಂಕ್ ಖಾತೆಗಳಲ್ಲಿ 150 ಕೋಟಿ ರು. ವಹಿವಾಟು ಸಹ ಆಗಿತ್ತು. ಸಂಜಯ್ ಕುಂದ್‌ನನ್ನೂ ಬಂಧಿಸಿದ ಪೊಲೀಸರು ಈ ಇಬ್ಬರು 1 ಸಾವಿರ ಕೋಟಿ ರು.ಗೂ ಅದಿಕ ವಹಿವಾಟು ನಡೆಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗಾಗಿ ದಾವಣಗೆರೆ ಸಿಇಎನ್ ಅಪರಾಧ ಠಾಣೆ ಪೊಲೀಸರಿಂದ ಸಿಐಡಿಗೆ ಹಸ್ತಾಂತರಿಸಲಾಗಿದೆ.