- ಅಧಿಕಾರ ಇವತ್ತು ಇರುತ್ತೆ, ನಾಳೆ ಹೋಗುತ್ತೆ, ಜನರ ಪ್ರೀತಿ, ವಿಶ್ವಾಸ ಶಾಶ್ವತ - - -
ದಾವಣಗೆರೆಯನ್ನು ರಾಜ್ಯದಲ್ಲೇ ಮಾದರಿ ಜಿಲ್ಲೆಯಾಗಿ ಮಾಡುವುದು ನನ್ನ ಬಹು ವರ್ಷಗಳ ಕನಸಾಗಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರದಲ್ಲಿ ನಿರಂತರ ಶ್ರಮಿಸುವೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.
ನಗರದ ಬಾಪೂಜಿ ಸಮುದಾಯ ಭವನದಲ್ಲಿ ಸೋಮವಾರ ಎಸ್ಸೆಸ್ಸೆಂ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ತಮ್ಮ 58ನೇ ವರ್ಷದ ಜನ್ಮದಿನಾಚರಣೆಯಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು. ಈಗ್ಗೆ 20 ವರ್ಷಗಳ ಜಿಲ್ಲಾ ಕೇಂದ್ರದ ರಸ್ತೆ ಹೇಗಿದ್ದವು, ಈಗ ಹೇಗಿವೆ ಎಂಬುದನ್ನು ನಮ್ಮ ಕೆಲಸಗಳೇ ಹೇಳುತ್ತವೆ ಎಂದರು.ಜಿಲ್ಲಾ ಕೇಂದ್ರದ ಉತ್ತರ, ದಕ್ಷಿಣ ಭಾಗದಲ್ಲಿ ರಸ್ತೆ, ಚರಂಡಿ, ಒಳಚರಂಡಿ ಸೇರಿದಂತೆ ಮೂಲ ಸೌಕರ್ಯಗಳು ಉತ್ತಮವಾಗಿವೆ. ಕುಂದುವಾಡ ಕೆರೆ, ಟಿವಿ ಸ್ಟೇಷನ್ ಕೆರೆ, ತುಂಗಭದ್ರಾ ನದಿ ನೀರಿನ ಜೊತೆಗೆ ಜಲಸಿರಿ ಯೋಜನೆಯೂ ಸಮರ್ಪಕ ಅನುಷ್ಠಾನಗೊಳ್ಳುತ್ತಿದೆ. ದೇಶ, ರಾಜ್ಯದಲ್ಲೇ ವಾಸಯೋಗ್ಯ ಮಹಾ ನಗರವೆಂಬ ಶ್ರೇಯ ದಾವಣಗೆರೆಗೆ ಲಭಿಸಿದ್ದೇ ಅಭಿವೃದ್ಧಿ ಕಾರ್ಯಕ್ಕೆ ಸಾಕ್ಷಿ ಎಂದು ತಿಳಿಸಿದರು.
ಎಲ್ಲ ಜಾತಿ, ಧರ್ಮೀಯರೂ ನಮ್ಮೊಂದಿಗಿದ್ದಾರೆ. ಪಕ್ಷ ಸಂಘಟನೆಯಲ್ಲೂ ನಮ್ಮೊಟ್ಟಿಗೆ ಜನರಿದ್ದಾರೆ. ರಾಜಕೀಯ, ಅಧಿಕಾರ ಇವೆಲ್ಲವೂ ಇವತ್ತು ಇರುತ್ತೆ, ನಾಳೆ ಹೋಗುತ್ತೆ. ಆದರೆ, ಜನರ ಪ್ರೀತಿ, ವಿಶ್ವಾಸ ಶಾಶ್ವತವಾದುದು. ನಮಗೆ ಅಂತಹ ಪ್ರೀತಿ, ವಿಶ್ವಾಸವೇ ಮುಖ್ಯ. ದಾವಣಗೆರೆ ನಗರ, ಜಿಲ್ಲೆಯನ್ನು ಮಾದರಿಯಾಗಿಸಲು ನಾವು, ನೀವೆಲ್ಲರೂ ಶ್ರಮಿಸೋಣ ಎಂದರು.
- - -
* ಪತಿ ಎಸ್ಸೆಸ್ಸೆಂ ನನಗೆ ಸ್ಫೂರ್ತಿ: ಡಾ.ಪ್ರಭಾ ಇದು ಕುಟುಂಬದ ಕಾರ್ಯಕ್ರಮ. ಕಾಂಗ್ರೆಸ್ ಪಕ್ಷ ಒಂದು ಕುಟುಂಬವಿದ್ದಂತೆ. ಶಾಮನೂರು ಮನೆ ಸೊಸೆಯಾಗಿ 21 ವರ್ಷವಾಗಿದೆ. ಎಲ್ಲ ಸಂದರ್ಭದಲ್ಲೂ ನನಗೆ ಪತಿ ಎಸ್.ಎಸ್. ಮಲ್ಲಿಕಾರ್ಜುನ ನನಗೆ ಸ್ಫೂರ್ತಿಯಾಗಿದ್ದಾರೆ. ಪ್ರತಿ ಸಲ ಶಾಸಕರಾಗಿ ದಾವಣಗೆರೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಮುಂದಿನ 50 ವರ್ಷ ನೆನಪಿನಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ. ಇಡೀ ದೇಶ, ವಿಶ್ವವೇ ದಾವಣಗೆರೆಯತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಧೂಳು ಮುಕ್ತ ನಗರ, ಸಿಮೆಂಟ್ ರಸ್ತೆ, ಸಮರ್ಪಕ ನೀರು ಹೀಗೆ ನಾನಾ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದಾರೆ. ಮುಂದೆಯೂ ಅಭಿವೃದ್ಧಿ ಕಾರ್ಯ ಭರದಿಂದ ಸಾಗಲಿವೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
-(ಫೋಟೋ ಬರಲಿವೆ)