- ರೈತ ಸಾಧಕರು, ರೈತ ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ - - -
ರಾಜ್ಯಮಟ್ಟದ ಬೆಳೆ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆಯ 15 ರೈತರು ಮತ್ತು ರೈತ ಮಹಿಳೆಯರಿಗೆ ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ನಡೆದ ಅಂತರ ರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯಿಂದ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ 8 ರೈತರು, 7 ಜನ ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಿ, ಶುಭ ಕೋರಿದರು. ಶೇಂಗಾ ಮತ್ತು ಬತ್ತದ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆದು, ಎರಡೂ ಬೆಳೆಗಳಲ್ಲೂ ರಾಜ್ಯಮಟ್ಟದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಜಿಲ್ಲೆಗೆ ತಂದಿದ್ದಲ್ಲದೇ, ರಾಜ್ಯಮಟ್ಟದಲ್ಲಿ ಹೆಚ್ಚಿನ ಕೃಷಿ ಪ್ರಶಸ್ತಿ ಪಡೆದ ಎರಡನೇ ಜಿಲ್ಲೆ ದಾವಣಗೆರೆ ಎಂಬ ಕೀರ್ತಿಯನ್ನು ತಂದಿದ್ದಾರೆ ಎಂದು ಕೃಷಿ ಇಲಾಖೆ ತಿಳಿಸಿದೆ.2024-25ನೇ ಸಾಲಿನಲ್ಲಿ ಶೇಂಗಾ ಬೆಳೆ ಪುರುಷರ ವಿಭಾಗದಲ್ಲಿ ನ್ಯಾಮತಿ ತಾಲೂಕಿನ ರಾಮೇಶ್ವರ ಎಲ್.ನವೀನ ಪ್ರಥಮ, ಬೆಳಗುತ್ತಿ ಗ್ರಾಮದ ಚಂದ್ರಪ್ಪ ದ್ವಿತೀಯ, ಬೆಳಗುತ್ತಿಯ ಟಿ.ಸುರೇಶಪ್ಪ ತೃತೀಯ ಸ್ಥಾನ ಪಡೆದಿದ್ದಾರೆ. ಮಹಿಳೆಯರ ವಿಭಾಗದ ಶೇಂಗಾ ಬೆಳೆಯಲ್ಲಿ ನ್ಯಾಮತಿ ತಾಲೂಕಿನ ಕೃಷಿ ಪ್ರಶಸ್ತಿಯನ್ನು ಮಲ್ಲಿಗೇನಹಳ್ಲಿ ಗ್ರಾಮದ ಮಂಜಮ್ಮ ಹಾಲೇಶಪ್ಪ ಪ್ರಥಮ, ಬೆಳಗುತ್ತಿ ಕಲಾವತಿ ಎ.ಗಿರಿಯಪ್ಪರಾಜ್ ಅರಸು ದ್ವಿತೀಯ, ರಾಮೇಶ್ವರದ ಸರ್ವಮಂಗಳ ಚಂದ್ರಪ್ಪ ತೃತೀಯ ಪ್ರಶಸ್ತಿ ಪಡೆದಿದ್ದಾರೆ.
ಮೆಕ್ಕೆಜೋಳದ ಬೆಳೆ ಪುರುಷರ ವಿಭಾಗಲ್ಲಿ ನ್ಯಾಮತಿ ತಾ. ಬೆಳಗುತ್ತಿ ರೇವಣಸಿದ್ದಪ್ಪ ಶಿವೋಳ್ ಪ್ರಥಮ, ಶೇಂಗಾ ಬೆಳೆ ವಿಭಾಗದಲ್ಲಿ ಬೆಳಗುತ್ತಿ ಲಕ್ಕಮ್ಮ ಕೆ.ಶಿವಪ್ಪ ಪ್ರಥಮ, ಬಿಜೋಗಟ್ಟೆ ಪ್ರಭಾಕರ ದ್ವಿತೀಯ ಸ್ಥಾನ ಪಡೆದಿದ್ದಾರೆ.
(ಬಾಕ್ಸ್)
* ರಾಜ್ಯಮಟ್ಟದ ಬೆಳೆ ಸ್ಪರ್ಧೆಯಲ್ಲಿ ಕೃಷಿ ಪ್ರಶಸ್ತಿ ಪಡೆದು ರೈತರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸಾಧಕ ರೈತರು ಇತರೆ ರೈತರಿಗೆ ಮಾರ್ಗದರ್ಶಿಗಳಾಗಿ, ದಾರಿದೀಪವಾಗಿ ಕೆಲಸ ಮಾಡಬೇಕು. ತಾವು ಕಂಡುಕೊಂಡ ಯಶಸ್ಸಿನ ಸೂತ್ರಗಳನ್ನು ಇತರ ರೈತರಿಗೂ ತಿಳಿಸಿ, ಅದೇ ಹಾದಿಯಲ್ಲಿ ಉತ್ತಮ ಕೃಷಿ ಹಾಗೂ ಲಾಭ ಗಳಿಕೆಯಡೆಗೆ ಸಾಗುವಂತೆ ಪ್ರೇರೇಪಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಜಿಯಾವುಲ್ಲಾ ಅಭಿನಂದಿಸಿ, ಮನವಿ ಮಾಡಿದ್ದಾರೆ.- - -
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಬೆಳೆ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆಗೆ 2ನೇ ಸ್ಥಾನದ ಜೊತೆಗೆ ವೈಯಕ್ತಿಕ ಪ್ರಶಸ್ತಿ ಪಡೆದ ರೈತರು, ರೈತ ಮಹಿಳೆಯರನ್ನು ಸರ್ಕಾರದ ವತಿಯಿಂದ ಸಿಎಂ ಸನ್ಮಾನಿಸಿದರು.