)
ಉಡುಪಿ: ಕಾಪು ತಾಲೂಕಿನ ಮುದರಂಗಡಿ ಪೇಟೆಯಲ್ಲಿ ಶುಕ್ರವಾರ ಮಧ್ಯಾಹ್ನ ಮಾಜಿ ರೌಡಿ ಶೀಟರ್ ಡೇವಿಡ್ ಡಿಸೋಜನನ್ನು ಕೊಲೆಗೈದ ಹೊರ ರಾಜ್ಯದ ವೃತ್ತಿಪರ ಸುಪಾರಿ ಕೊಲೆಗಾರರನ್ನು ಘಟನೆ ನಡೆದ ಏಳು ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿದ ನಂತರ ಈ ಮೂವರು ಬಸ್‌ನಲ್ಲಿ ಉಡುಪಿಯಿಂದ ಭಟ್ಕಳಕ್ಕೆ ತೆರಳುತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕುಮಟಾ ಮತ್ತು ಭಟ್ಕಳ ಪೊಲೀಸರ ಸಹಕಾರದಿಂದ ಆರೋಪಿಗಳನ್ನು ಬಂಧಿಸಿದ್ದಾರೆ.
ಆ. 7ರಂದು ಮಧ್ಯಾಹ್ನ ಸುಮಾರು 3.45ರ ವೇಳೆಗೆ ಮುದುರಂಗಡಿಯಲ್ಲಿನ ತನ್ನ ಕಚೇರಿಯಿಂದ ತೆರಳಲು ಕಾರು ಹತ್ತುತ್ತಿದ್ದ ಡೇವಿಡ್‌ನನ್ನು ಹಿಂದಿನಿಂದ ಬಂದ ಆಗಂತುಕ 9 ಎಂಎಂ ಪಿಸ್ತೂಲ್‌ನಿಂದ ತಲೆ ಹಾಗೂ ಎದೆಗೆ ಗುಂಡು ಹಾರಿಸಿ, ಇನ್ನೊಬ್ಬನ ಜೊತೆ ಬೈಕ್‌ನಲ್ಲಿ ಪರಾರಿಯಾಗಿದ್ದರು. ಘಟನಾ ಸ್ಥಳದ ಸಿಸಿ ಕ್ಯಾಮೆರಾದಲ್ಲಿ ಕೊಲೆಯ ದೃಶ್ಯ ಸ್ಪಷ್ಟವಾಗಿ ದಾಖಲಾಗಿದ್ದು, ಇದರ ಆಧಾರದಲ್ಲಿ ಪೊಲೀಸರು 3 ತಂಡಗಳಲ್ಲಿ ಕಾರ್ಯಾಚರಣೆಗಿಳಿದಿದ್ದರು. ಆರೋಪಿಗಳು ಉಡುಪಿಯಿಂದ ಭಟ್ಕಳಕ್ಕೆ ತೆರಳುವ ಬಸ್‌ಗೆ ಹತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಪೊಲೀಸರ ಈ ಸಾಧನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಪು ಎಸ್ಐ ತೇಜಸ್ವಿ ಅವರ ತಂಡವು ಬೈಂದೂರು ತಾಲೂಕಿನ ಒತ್ತಿನೆಣೆಯಲ್ಲಿ ಮಧ್ಯರಾತ್ರಿ ಬಸ್ಸೊಂದನ್ನು ತಡೆದು ಶೋಧ ನಡೆಸಿದಾಗ ಮುಖವನ್ನು ಶಾಲ್‌ನಿಂದ ಮುಚ್ಚಿಕೊಂಡು ಕುಳಿತಿದ್ದ ಆರೋಪಿಗಳು ಪತ್ತೆಯಾಗಿದ್ದಾರೆ.ತಾವು ಪೊಲೀಸರ ಬಲೆಗೆ ಬಿದ್ದ ಅರಿವಾಗುತ್ತಿದ್ದಂತೆ ಆರೋಪಿಗಳು ಬಸ್‌ನಿಂದ ಪರಾರಿಯಾಗಲೆತ್ನಿಸಿದರು. ಆಗ ಪೊಲೀಸರು ಅವರನ್ನು ಬೆನ್ನಟ್ಟಿದರು. ಆರೋಪಿ ರಾಜು ಎಂಬಾತ ಕಾಪು ಎಸ್ಐ ತೇಜಸ್ವಿ ಅವರನ್ನು ದೂಡಿ ಹಾಕಿ, ಅವರ ಮೇಲೆ ತನ್ನಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ, ಕೂಡಲೇ ಎಸ್‌ಐ ಅವರು ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿ ಆತನನ್ನು ಬೀಳಿಸಿ ಬಂಧಿಸಿದರು. ಆತನಿಂದ ಪಿಸ್ತೂಲ್‌ನ್ನು ವಶಕ್ಕೆ ಪಡೆಯಲಾಗಿದೆ. ತಪ್ಪಿಸಿಕೊಂಡು ಬೇರೆ ಬಸ್‌ಗಳಲ್ಲಿ ಪರಾರಿಯಾಗುತ್ತಿದ್ದ ಇನ್ನಿಬ್ಬರು ಆರೋಪಿಗಳಲ್ಲಿ ಅಜಯ್ ರಸ್ತೋಗಿಯನ್ನು ಕುಮಟಾದಲ್ಲಿ ಹಾಗೂ ಜಿಯಾಹುಲ್ ವಜೂಲ್ ಶೇಖ್ ನನ್ನು ಭಟ್ಕಳದಲ್ಲಿ ಸ್ಥಳೀಯ ಪೊಲೀಸರ ಸಹಕಾರದಿಂದ ಶನಿವಾರ ಮುಂಜಾನೆ ಬಂಧಿಸಲಾಗಿದೆ. ಗಾಯಗೊಂಡ ಆರೋಪಿ ರಾಜುವನ್ನು ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಎಸ್‌ಐ ತೇಜಸ್ವಿ ಅವರ ಕೈಗೂ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಹಣಕಾಸಿನ ವೈಮನಸ್ಸು: ಕೊಲೆಯಾದ ಕಾಂಗ್ರೆಸ್ ನಾಯಕ, ಮಾಜಿ ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜ ಮೇಲೆ ಈ ಹಿಂದೆ ಅನೇಕ ಪ್ರಕರಣಗಳು ದಾಖಲಾಗಿದ್ದವು. ಬಸ್ ಮಾಲೀಕ, ಗುತ್ತಿಗೆದಾರನಾಗಿದ್ದ ಆತ ಹೊರ ರಾಜ್ಯದ ಕಂಪನಿಯೊಂದರ ಕಾಮಗಾರಿಯನ್ನು ನಿರ್ವಹಿಸುತಿದ್ದ. ಈ ನಡುವೆ ಕಂಪನಿಯೊಂದಿಗೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿದ್ದು, ಇದೇ ಹಿನ್ನೆಲೆಯಲ್ಲಿ ಅವರನ್ನು ಹತ್ಯೆ ಮಾಡಲು ಸುಪಾರಿ ನೀಡಿರುವ ಬಗ್ಗೆ ಪೊಲೀಸರು ಮಾಹಿತಿ ಪಡೆದಿದ್ದಾರೆ. ಸುಪಾರಿ ನೀಡಿದವರು, ಕೃತ್ಯಕ್ಕೆ ಸಹಕರಿಸಿದವರು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.