ಕನ್ನಡಪ್ರಭ ವಾರ್ತೆ ಮಂಡ್ಯ
ಭ್ರಷ್ಟಾಚಾರ ವಿರೋಧಿ ವೇದಿಕೆ, ರೈತಸಂಘ, ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸಿಇಒ ಕೆ.ಆರ್.ನಂದಿನಿ ಹಠಾವೋ- ಮಂಡ್ಯ ಜಿಲ್ಲಾ ಪಂಚಾಯಿತಿ ಬಚಾವೋ’ ಎಂಬ ಘೋಷಣೆಗಳೊಂದಿಗೆ ಹೋರಾಟ ನಡೆಸಿದ್ದಾರೆ.
ಜಿಲ್ಲಾ ಪಂಚಾಯಿತಿ ಆವರಣದಿಂದ ೬೦ ಟನ್ ಕಬ್ಬಿಣ ಅಕ್ರಮವಾಗಿ ಸಾಗಣೆಯಾಗಿದೆ. ಈ ಬಗ್ಗೆ ದೂರು ನೀಡಿದರೂ ಇದುವರೆಗೂ ಸಿಇಓ ಅವರು ಸಮರ್ಪಕ ಉತ್ತರ ನೀಡಿಲ್ಲ. ಸರಿಯಾದ ತನಿಖೆ ನಡೆಸಿಲ್ಲ. ಸಿಸಿಟೀವಿ ದೃಶ್ಯಾವಳಿಗಳನ್ನು ನೀಡುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.ಸರ್ಕಾರಿ ವಾಹನಗಳ ದುರ್ಬಳಕೆ, ನರೇಗಾ ಯೋಜನೆಯಲ್ಲಿ ಎನ್‌ಎಂಆರ್‌ಎಸ್ ಹಾಜರಾತಿ, ಫೋಟೋಗಳಿಲ್ಲದೆ ಹಣ ವಿನಿಯೋಗ, ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮ ಪಂಚಾಯಿತಿಯ ಅವ್ಯವಹಾರ ಕುರಿತು ಓಂಬುಡ್ಸ್‌ಮನ್ ವರದಿ ನೀಡಿದ್ದರೂ ಕ್ರಮ ಕೈಗೊಳ್ಳದೆ ಉದಾಸೀನ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿದರು.
ಸಾರ್ವಜನಿಕರಿಂದ ಸಲ್ಲಿಕೆಯಾಗುತ್ತಿರುವ ದೂರುಗಳಿಗೆ ಸಮರ್ಪಕ ಸ್ಪಂದನೆ ಇಲ್ಲದೆ ಏಕಪಕ್ಷೀಯ ಧೋರಣೆ ಅನುಸರಿಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಆಡಳಿತದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಎಲ್ಲ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಹಾಗೂ ಸಿಇಒ ಕೆ.ಆರ್. ನಂದಿನಿ ಅವರನ್ನು ತಕ್ಷಣವೇ ಮಂಡ್ಯ ಜಿಲ್ಲೆಯಿಂದ ವರ್ಗಾಯಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸದಿದ್ದರೆ ಹೋರಾಟವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.