ಕನ್ನಡ ಪ್ರಭವಾರ್ತೆ ಚನ್ನರಾಯಪಟ್ಟಣ
ದಿಂಡಗೂರು ಹಾಲು ಉತ್ಪಾದಕರ ಸಹಕಾರ ಸಂಘದ ಈ ಹಿಂದಿನ ಅಧ್ಯಕ್ಷ ಡಿ.ಎಂ. ಕೋಡಿಗೌಡ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು, ದಯಾನಂದ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆ ಅವಿರೋಧ ಎಂದು ಚುನಾವಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯೇಂದ್ರ ಘೋಷಣೆ ಮಾಡಿದರು. ನೂತನ ಅಧ್ಯಕ್ಷರನ್ನು ಗೌರವಿಸಿ ದಿಂಡಗೂರು ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಅಧ್ಯಕ್ಷ ಡಿ.ಕೆ. ಚೇತನ್ ಮಾತನಾಡಿ ದೇಶದ ಬೆನ್ನೆಲುಬು ರೈತರಾದರೆ, ರೈತರ ಬೆನ್ನೆಲುಬು ಹೈನುಗಾರಿಕೆ, ಕೃಷಿಕರು ಹೈನುಗಾರಿಕೆಯಿಂದ ಮಾತ್ರ ಮಾಸಿಕ ಹಣವನ್ನು ನಿರೀಕ್ಷಿಸಬಹುದು ಹೊರತು ಇತರ ಕೃಷಿಯಿಂದ ಆದಾಯ ನಿರೀಕ್ಷಿಸುವುದು ಅನುಮಾನ ಎಂದರು.
ದೇಶಕ್ಕೆ ಕೊರೋನಾ ಬಂದಾರ ದೇಶ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿತ್ತು. ಇಂತಹ ವೇಳೆಯಲ್ಲಿ ಹೈನುಗಾರಿಕೆ ಮಾಡುವ ರೈತರನ್ನು ಹೊರತುಪಡಿಸಿದರೆ ಉಳಿದವರು ಬದುಕು ನಡೆಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೆವು, ರೈತರು ಕೃಷಿಯೊಂದಿಗೆ ಹೈನುಗಾರಿಕೆ ಮಾಡುವ ಮೂಲಕ ಆರ್ಥಿಕವಾಗಿ ಸದೃಡರಾಗಬಹುದಾಗಿದೆ ಎಂದು ಹೇಳಿದರು. ಹೈನುಗಾರಿಕೆಗೆ ಉತ್ತೇಜನ ನೀಡಬೇಕೆಂದರೆ ನೂತನ ಅಧ್ಯಕ್ಷರು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ರಿಯಾಯಿತಿ ದರದಲ್ಲಿ ರಾಸುಗಳ ಮೇವು ಕತ್ತಿರಿಸುವ ಯಂತ್ರ, ಮ್ಯಾಟ್, ಹಾಲು ಕೆರೆಯುವ ಯಂತ್ರ ಸೇರಿದಂತೆ ಹೈನುಗಾರಿಕೆ ಸಲಕರಣೆಗಳನ್ನು ಶಾಸಕರ ಸಹಕಾರದಲ್ಲಿ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.ಪ್ರಸಕ್ತ ವರ್ಷ ಮಳೆ ಕಡಿಮೆ, ಮೇವಿನ ಸಮಸ್ಯೆ ಉಂಟಾದರೆ ಮೇವಿನ ಬೀಜವನ್ನು ಹಾಲು ಉತ್ಪಾಕದರ ಸಹಕಾರ ಸಂಘದ ಮೂಲಕ ವಿತರಣೆಗೆ ಮುಂದಾಗಬೇಕು, ಹಾಲು ಹಾಕುವವರಿಗೆ ಪ್ರತಿ ವಾರವೂ ಹಣವನ್ನು ಅವರ ಖಾತೆಗೆ ಜಮೆ ಮಾಡಿದರೆ ಹೈನುಗಾರಿಕೆ ಮಾಡುವವರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದಂತೆ ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು. ಸಂಘದ ಕಟ್ಟಡ ಶಿಥಿಲವಾಗಿದೆ, ಹೊಸ ಕಟ್ಟಡ ನಿರ್ಮಾಣಕ್ಕೆ ಆಡಳಿತ ಮಂಡಳಿ ಚಿಂತನೆ ಮಾಡಬೇಕು, ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾದರೆ ಧರ್ಮಸ್ಥಳ ಸಂಘದಿಂದ ಎರಡು ಲಕ್ಷ ರು. ಅನದಾನ ನೀಡುತ್ತದೆ, ಶಾಸಕರ ಸಹಕಾರದಿಂದ ಹಾಸನ ಹಾಲು ಒಕ್ಕೂಟದಿಂದ ಹಾಗೂ ಕೆಎಂಎಫ್ ನಿಂದ ಅನುದಾನ ತಂದು ಸಂಘದಲ್ಲಿ ಲಾಭವನ್ನು ಪಡೆದು ಕಟ್ಟಡ ನಿರ್ಮಾಣ ಮಾಡಬಹುದಾಗಿದೆ ಎಂದು ಹೇಳಿದರು.ಉಪಾಧ್ಯಕ್ಷೆ ಡಿ. ಪಿ. ವನಿತಾ, ಕಾರ್ಯದರ್ಶಿ ಡಿ.ಪಿ.ರಾಜು, ನಿರ್ದೇಶಕರಾದ ವಸಂತ, ಮಂಜೇಗೌಡ, ಕೋಡಿಗೌಡ, ಡಿ. ಎಚ್. ಕೃಷ್ಣ, ಶಂಕರ್, ವಿಜಯಲಕ್ಷ್ಮೀ, ಡಿ. ಆರ್, ಶಂಕರ್, ಡಿ.ವಿ. ಪವಿತ್ರ, ಪಿ.ಲಲಿತಮ್ಮ, ನಾಗರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಾಯಿಶ್, ಮಾಜಿ ಸದಸ್ಯ ಪುಟ್ಟೇಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿಜಯ್, ಮುಖಂಡರಾದ ಸಣ್ಣಮೊಗಣ್ಣ, ಸಂಜು, ನಾಗು ಮೊದಲಾದವರಿದ್ದರು.