ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶ್ರೀನಿಮಿಷಾಂಬ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಎಸ್.ಎನ್.ದಯಾನಂದ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು.ಪಟ್ಟಣ ಸಮೀಪದ ಗಂಜಾಂನ ಶ್ರೀನಿಮಿಷಾಂಬ ದೇವಾಲಯದ 9 ಮಂದಿ ಸಮಿತಿ ಸದಸ್ಯರ ಪೈಕಿ ಎಸ್.ಎನ್ ದಯಾನಂದ್ ಅವರನ್ನು ಒಮ್ಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ನಂತರ ನೂತನ ಅಧ್ಯಕ್ಷ ದಯಾನಂದ್ ಮಾತನಾಡಿ, ಶ್ರೀ ನಿಮಿಷಾಂಬ ದೇವಾಲಯದಲ್ಲಿ ರಥ ನಿರ್ಮಾಣ ಹಾಗೂ ಶ್ರೀ ಚುಂಚನಗಿರಿ ಕಾಲಭೈರವೇಶ್ವರ ದೇವಾಲಯದ ಮಾದರಿಯಲ್ಲಿ ಇಲ್ಲೂ ಸಹ ಅಭಿವೃದ್ಧಿ ಪಡಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದರು. ದೇವಾಲಯದ ಮುಂಭಾಗದಲ್ಲಿನ ಪಾರ್ಕಿಂಗ್ ಸ್ವಚ್ಛತೆಗೊಳಿಸಿ, ಅಭಿವೃದ್ಧಿ ಪಡಿಸಲಾಗುವುದು. ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಷ್ಟೆ ಗಂಗಾಧರೇಶ್ವರ ಸ್ವಾಮಿ ದೇವಾಲಯ ಪ್ರಸಿದ್ದಿ ಹೊಂದಿದೆ ಎಂದರು.ಈ ಹಿಂದೆ ನಡುವಳೆಗಂಗಾಧರ ಎಂದೇ ಕರೆಯುತ್ತಿದ್ದರು. ದೇವಾಲಯದ ಸುತ್ತಲು ನದಿ ಹರಿಯುತ್ತಿತ್ತು, ಕೋಟೆ ನಿರ್ಮಿತವಾದ ನಂತರ ದೇವಸ್ಥಾನ ಪಟ್ಟಣದಲ್ಲಿ ಉಳಿದು ಕೊಂಡಿದೆ. ಆ ದೇವಾಲಯವನ್ನು ಶ್ರೀ ನಿಮಿಷಾಂಬ ದೇವಾಲಯದಿಂದ ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಸರ್ಕಾರ ನದಿ ಬಳಿ ಸೋಪು, ಶಾಂಪು ಮಾರಾಟ ಮಾಡುವುದನ್ನ ನಿಷೇದಿಸಿರುವುದನ್ನು ಸ್ವಾಗತಿಸುತ್ತೇನೆ. ಭಕ್ತರು ಸಹ ಧಾರ್ಮಿಕವಾಗಿ ನದಿಯಲ್ಲಿ ಮುಳುಗಿ ಬರಬೇಕೆ ವಿನಃ ಸೋಪು, ಶಾಂಪು ಬಳಸುವುದು, ನದಿಯಲ್ಲಿ ಬಟ್ಟೆಗಳನ್ನು ಬಿಟ್ಟು ಬರುವುದನ್ನು ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದರು.ದೇಗುಲಕ್ಕೆ ಬರುವ ಭಕ್ತರ ಮೌಲ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ, ಬಟ್ಟೆ ಬದಲಾಯಿಸಿಕೊಳ್ಳುವ ತಾತ್ಕಾಲಿಕ ಟೆಂಟ್‌ಗಳ ನಿರ್ಮಿಸುವ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
ಈ ವೇಳೆ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಸಿ.ಬಿ ಕೃಷ್ಣ, ಸಮಿತಿ ಸದಸ್ಯರಾದ ಪಿ.ಬಾಲಸುಬ್ರಹ್ಮಣ್ಯ, ಟಿ. ಕೃಷ್ಣ, ಪೂರ್ಣಪ್ರಜ್ಞ ಮೂರ್ತಿ, ಎಸ್.ಕೃಷ್ಣ, ಭಾಗ್ಯಲಕ್ಷ್ಮಿ, ರಂಗಸ್ವಾಮಿ, ಸುಮಾಲತ, ಸೂರ್ಯ ನಾರಾಯಣಭಟ್ ಇತರರು ಇದ್ದರು.