ಕನ್ನಡಪ್ರಭ ವಾರ್ತೆ, ದಾವಣಗೆರೆ
ತೀವ್ರ ಬರದಿಂದ ಕುಡಿಯುವ ನೀರಿನ ಸಮಸ್ಯೆ ಒಂದು ಕಡೆಯಾದರೆ, ಮತ್ತೊಂದು ಕಡೆ ಪೂರೈಸುತ್ತಿರುವ ನೀರು ಸಹ ಶುದ್ಧವಾಗಿಲ್ಲ. ನೀರಿನ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ನಿರ್ಲಕ್ಷ್ಯ ಸರಿಯಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ. ಸತೀಶ ಕೊಳೇನಹಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಒಟ್ಟು 18892 ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಇವುಗಳಲ್ಲಿ ಬರೋಬ್ಬರಿ 1980 ಘಟಕ ಕೆಟ್ಟು ಸ್ಥಗಿತವಾಗಿದೆ. ದಾವಣಗೆರೆ ಜಿಲ್ಲೆಯಲ್ಲೂ 600 ಶುದ್ಧ ನೀರಿನ ಘಟಕಗಳ ಪೈಕಿ 100 ಘಟಕ ಹಾಳಾಗಿವೆ. ಆದರೆ, ದುರಸ್ತಿಪಡಿಸುವ, ಶುದ್ಧ ನೀರು ಪೂರೈಸುವ ಕೆಲಸವಾಗುತ್ತಿಲ್ಲ ಎಂದರು.
ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಿ, ನೀರು ಪೂರೈಸುವ ಮೂಲಕ ಮನೆ ಮನೆಗೆ ಗಂಗೆ ವಿಶೇಷ ಯೋಜನೆ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ನೀರಾವರಿ ಸಚಿವಾಲಯದ ಜಲಶಕ್ತಿ ಅಭಿಯಾನದಡಿ ಜಲಜೀವನ ಮಿಷನ್‌ನಡಿ 2019- 2020ನೇ ಸಾಲಿನಿಂದ ಈವರೆಗೆ ಜಿಲ್ಲೆಯ 691 ಹಳ್ಳಿ ಪೈಕಿ, 302 ಹಳ್ಳಿಯ ಎಲ್ಲ ಮನೆಗೆ ನೀರಿನ ಸಂಪರ್ಕ ಕಲ್ಪಿಸಿ, ಈ ಹಳ್ಳಿಗಳಲ್ಲಿ ಹರ್ ಘರ್ ಜಲ್ ಎಂಬುದಾಗಿ ಘೋಷಣೆ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ನೀರು ಪೂರೈಸುವ ಕೆಲಸವನ್ನೇ ಸರಿಯಾಗಿ ಮಾಡುತ್ತಿಲ್ಲ ಎಂದು ದೂರಿದರು.ಭದ್ರಾ ಜಲಾಶಯದಿಂದ ಜಿಲ್ಲೆಯ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ಹರಿದಿಲ್ಲ. ಇದರಿಂದ ಕೊಳವೆಬಾವಿಗಳ ನೀರು ಕಡಿಮೆಯಾಗಿ, ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಆದರೆ, ಸಚಿವರು ನಿರ್ಲಕ್ಷ್ಯ ತೋರುತ್ತಿದ್ದಾರೆ. ದೂರದೃಷ್ಟಿ ಕೊರತೆಯಿಂದ ಐಸಿಸಿ ಸಭೆಗೆ ಗೈರಾಗಿದ್ದಾರೆ. ಈಗ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಚ್ಚುಕಟ್ಟು ಕೊನೆ ಭಾಗಕ್ಕೂ ನೀರು ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಟೀಕಿಸಿದರು.
ಐಸಿಸಿ ಸಭೆಯ ನೀರು ಬಿಡುವ ವೇಳಾಪಟ್ಟಿಯೇ ಅವೈಜ್ಞಾನಿಕವಾಗಿದೆ. ಒಂದು ಸಲ 12 ದಿನ, ಇನ್ನೊಂದು ಸಲ 13 ದಿನ ನೀರು ಬಿಡುವ ಬದಲಿಗೆ ಒಂದೇ ಸಲ 20 ದಿನ ನೀರು ಹರಿಸಿ, ಕೊನೆಯ ಭಾಗಕ್ಕೆ ನೀರು ತಲುಪಿಸಲಿ. ಇದನ್ನು ಐಸಿಸಿ ಸಭೆಯಲ್ಲಿ ಭಾಗವಹಿಸಿ, ಗಟ್ಟಿಧ್ವನಿ ಎತ್ತಬೇಕಾಗಿದ್ದ ಜಿಲ್ಲಾ ಸಚಿವರು, ನೀರಾವರಿ ಇಲಾಖೆ ಅಧಿಕಾರಿಗಳು ಜಿಲ್ಲೆಯನ್ನು ಪ್ರತಿನಿಧಿಸಿಯೇ ಇಲ್ಲ. ಆದಕಾರಣ ಈಗ ನೀರಿನ ಸಮಸ್ಯೆ ಉಲ್ಭಣಿಸುತ್ತಿದ್ದಂತೆ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಕೊನೆಯ ಭಾಗಕ್ಕೆ ನೀರು ಕೊಡುವಂತೆ ಹೇಳುತ್ತಿದ್ದಾರೆ ಎಂದರು.ಬಿಜೆಪಿ ಮುಖಂಡರಾದ ಪಾಲಿಕೆ ಸದಸ್ಯ ಆರ್.ಶಿವಾನಂದ, ಬೇತೂರು ಸಂಗನಗಡ, ಶ್ಯಾಗಲೆ ದೇವೇಂದ್ರಪ್ಪ, ಕರಿಲಕ್ಕೇನಹಳ್ಳಿ ಓಂಕಾರಪ್ಪ, ಆರನೇ ಕಲ್ಲು ವಿಜಯಕುಮಾರ ಇತರರು ಇದ್ದರು.
- - --22ಕೆಡಿವಿಜಿ61:
ದಾವಣಗೆರೆಯಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.