ಹೊಸಪೇಟೆ: ಪ್ರಸಿದ್ಧ ಪ್ರವಾಸಿ ತಾಣವಾದ ವಿಜಯನಗರ ಜಿಲ್ಲೆಯ ಹಂಪಿಗೆ ಬರುವ ಪ್ರವಾಸಿಗರು ಹಾಗೂ ಭಕ್ತಾದಿಗಳಲ್ಲಿ ಭಕ್ತಿ ಭಾವನೆ ಮೂಡಿಸುವ ಸದುದ್ದೇಶದಿಂದ ಜಿಲ್ಲಾಡಳಿತವು ಹೊಸ ಹಜ್ಜೆ ಇರಿಸಿದೆ. ದೇವಸ್ಥಾನಗಳಲ್ಲಿ ಸಾಂಪ್ರದಾಯಿಕ ಬಟ್ಟೆ ಧರಿಸಲು ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರು ಶುಕ್ರವಾರ ವಿರೂಪಾಕ್ಷೇಶ್ವರನ ಸನ್ನಿಧಿಯಲ್ಲಿ ತಾವೇ ಖುದ್ದು ಭಕ್ತರಿಗೆ, ಪ್ರವಾಸಿಗರಿಗೆ ಪಂಚೆ, ಶಲ್ಯ ನೀಡಿ, ತುಂಡುಡುಪು ಧರಿಸಿ ದೇವಸ್ಥಾನ ಪ್ರವೇಶಿಸದಂತೆ ಜಾಗೃತಿ ಮೂಡಿಸಿದರು.
ಇದೀಗ ದೇವಸ್ಥಾನವನ್ನು ಸಂಪೂರ್ಣ ಗಣಕೀಕರಣಗೊಳಿಸುವುದಕ್ಕೆ ಸಹ ಜಿಲ್ಲಾಧಿಕಾರಿ ವಿಶೇಷ ಕ್ರಮ ವಹಿಸಿದ್ದು, ಮೊದಲನೇಯದಾಗಿ ಶಾಸಕರಿಂದಲೇ ಹಣ ಪಡೆದು ಗಣಕೀಕೃತ ರಸೀದಿ ನೀಡಿ ಸೇವೆಗೆ ಜಿಲ್ಲಾಧಿಕಾರಿ ಅವಕಾಶ ಕಲ್ಪಿಸಿದರು. ಇದರಿಂದ ಸೋರಿಕೆ ತಡೆದು ದೇವಸ್ಥಾನಕ್ಕೆ ಹೆಚ್ಚಿನ ಆದಾಯ ಬರುವಂತಾಗಲಿದೆ. ಜತೆಗೆ ದೇವಸ್ಥಾನದಲ್ಲಿ ಮೆಟಲ್ ಡಿಟೆಕ್ಟರ್ ಕೂಡಾ ಅಳವಡಿಸಲು ಜಿಲ್ಲಾಡಳಿತ ಕ್ರಮ ವಹಿಸಿತು.