ಮತದಾನ ಜಾಗೃತಿಗೆ ಬ್ಯಾಟ್ ಬೀಸಿದ ಡಿಸಿ

KannadaprabhaNewsNetwork |  
Published : Apr 07, 2024, 01:48 AM IST
ಮತದಾನ ಜಾಗೃತಿ ಅಂಗವಾಗಿ ಕಾರವಾರದಲ್ಲಿ ಕ್ರಿಕೇಟ್ ಪಂದ್ಯಾವಳಿಯ ಉದ್ಘಾಟನೆ ನಡೆಯಿತು. | Kannada Prabha

ಸಾರಾಂಶ

ಮತದಾರರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾದ್ಯಂತ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.

ಕನ್ನಡಪ್ರಭ ವಾರ್ತೆ ಕಾರವಾರ

ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆಯಲ್ಲಿ ಎಲ್ಲಾ ಮತದಾರರಿಂದ ತಪ್ಪದೇ ಮತದಾನ ಮಾಡಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು, ಜಿಲ್ಲಾಡಳಿತ, ಜಿಪಂ, ತಾಪಂ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನಗರದ ಮಾಲಾದೇವಿ ಕ್ರೀಡಾಂಗಣದಲ್ಲಿ ಶನಿವಾರ ಕ್ರಿಕೆಟ್ ಪಂದ್ಯಾವಳಿ ನಡೆಯಿತು.

ಕ್ರಿಕೆಟ್ ಪಿಚ್‌ನಲ್ಲಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಬ್ಯಾಟ್ ಬೀಸುವ ಮೂಲಕ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವೀಪ್ ಶಾಟ್ ಬಾರಿಸುವ ಮೂಲಕ ಚುನಾವಣಾ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ವಿಶಿಷ್ಠ ರೀತಿಯಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲೆಯಲ್ಲಿ ಮೇ 7ರಂದು ಮತದಾನ ನಡೆಯಲಿದ್ದು, ಎಲ್ಲ ಅರ್ಹ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೇ ಚುನಾವಣೆಯಲ್ಲಿ ತಮ್ಮ ಮತ ಚಲಾಯಿಸಬೇಕು. ಮತದಾರರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾದ್ಯಂತ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ. ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ನಾನೂ ಮತದಾನ ಮಾಡುತ್ತೇನೆ ಎಂದರು.ಸಿಇಒ ಈಶ್ವರಕುಮಾರ ಕಾಂದೂ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ. 75 ರಷ್ಟು ಮತದಾನವಾಗಿದ್ದು, ಈ ಬಾರಿ ಶೇ. 85ಕ್ಕೂ ಹೆಚ್ಚು ಮತದಾನವಾಗಬೇಕು ಎನ್ನುವ ಗುರಿ ಹೊಂದಿದ್ದು ಈ ನಿಟ್ಟಿನಲ್ಲಿ ಸ್ವೀಪ್ ವತಿಯಿಂದ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಳೆದ ಬಾರಿ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಈ ಬಾರಿ ಹೆಚ್ಚಿನ ಮತದಾನವಾಗುವಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ನರೇಗಾ ಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬರಿಗೂ ಅರಿವು ಮೂಡಿಸಲಾಗುತ್ತಿದೆ. ಮೇ 7ರಂದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಕೇಂದ್ರಗಳಿಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಮತದಾರರ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಯುವ ಮತದಾರರಿರಿಗೆ ಮತದಾನದ ಮಹತ್ವ ಕುರಿತ ಕರಪತ್ರಗಳನ್ನು ವಿತರಿಸಲಾಯಿತು.

ಕ್ರಿಕೆಟ್ ಪಂದ್ಯದಲ್ಲಿ ಜಿಪಂ ವತಿಯಿಂದ ಸ್ವೀಪ್ ಸೂಪರ್ ಸ್ಟಾರ್ ತಂಡ, ಜಿಲ್ಲಾಧಿಕಾರಿ ಕಚೇರಿಯಿಂದ ಆರ್.ಒ. ಸೂಪರ್ ಸ್ಟಾರ್ ತಂಡ, ಎಸ್.ಪಿ. ಕಚೇರಿಯಿಂದ ಸಿವಿಜಿಲ್ ಕಾಪ್ಸ್ ಹಾಗೂ ಪತ್ರಿಕಾ ಮಾಧ್ಯಮದಿಂದ ಮಿಡಿಯಾ ವಾರಿಯರ್ಸ್ ತಂಡಗಳು ಭಾಗವಹಿಸಿದ್ದವು.

ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಉಪ ವಿಭಾಗಾಧಿಕಾರಿ ಕನಿಷ್ಕ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಸಿ.ಟಿ. ಜಯಕುಮಾರ, ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಮೊದಲಾದವರು ಇದ್ದರು.

ಉತ್ತಮ ಬ್ಯಾಟಿಂಗ್

ಜಿಪಂ ಸ್ವೀಪ್ ಸೂಪರ್ ಸ್ಟಾರ್ ತಂಡ ಮತ್ತು ಪತ್ರಿಕಾ ಮಾಧ್ಯಮದ ಮಿಡಿಯಾ ವಾರಿಯರ್ಸ್ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದ ಸಿಇಒ ಈಶ್ವರಕುಮಾರ ಕಾಂದೂ, ಕವರ್ ಡ್ರೈವ್, ಲಾಂಗ್ ಆನ್ ಶಾಟ್, ಸ್ಟ್ರೈಟ್ ಡ್ರೈವ್ ಮತ್ತು ಸ್ವೀಪ್ ಶಾಟ್ ಗಳ ಮೂಲಕ ಉತ್ತಮ ಬ್ಯಾಟಿಂಗ್ ಕೌಶಲ್ಯ ಪ್ರದರ್ಶಿಸಿದರು.

ಜಿಪಂ ತಂಡ ವಿಜಯ ಪತಾಕೆ ಹಾರಿಸಿತು. ಪೊಲೀಸ್ ತಂಡ ರನ್ನರ್ ಅಫ್ ಆಗಿ ಹೊರಹೊಮ್ಮಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ