- 4 ತಿಂಗಳ ಮಗು ಮ್ಯಾಚ್ । 3 ವರ್ಷಗಳಿಂದ ಕಾದಿದ್ದ ಪೋಷಕರಲ್ಲಿ ಸಂಭ್ರಮ - - - ಕನ್ನಡಪ್ರಭ ವಾರ್ತೆ, ದಾವಣಗೆರೆ 16 ವರ್ಷಗಳಿಂದ ಮಕ್ಕಳಿಲ್ಲದೇ ನಿರಾಸೆಯಾಗಿದ್ದ ಬಳ್ಳಾರಿ ಮೂಲದ ದಂಪತಿ ದಾವಣಗೆರೆ ಜಿಲ್ಲಾ ದತ್ತು ಸ್ವೀಕಾರ ಕೇಂದ್ರದಿಂದ 4 ತಿಂಗಳ ಗಂಡು ಮಗುವನ್ನು ದತ್ತು ಪಡೆದಿದರು. ಸೋಮವಾರ ಜಿಲ್ಲಾಧಿಕಾರಿ ಸರ್ಕಾರದ ನಿಯಮಗಳ ಪ್ರಕಾರ ಮಗುವನ್ನು ಹಸ್ತಾಂತರಿಸಿದರು.
ವೆಬ್‌ಸೈಟ್‌ನಲ್ಲಿ ನೋಂದಣಿ:
ದತ್ತು ಸ್ವೀಕಾರದಲ್ಲಿನ ಮಗುವನ್ನು ಬೇರೆ ಪೋಷಕರು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ನಿಯಮಗಳು ಇರುತ್ತವೆ. ಮಗು ಬೇಕಾದವರು ಸೆಂಟ್ರಲ್ ಅಡಾಪ್ಷನ್ ರೀಸೋರ್ಸ್ ಅಥಾರಿಟಿ ಮತ್ತು ಸ್ಟೇಟ್ ಅಡಾಪ್ಷನ್ ರೀಸೋರ್ಸ್ ಅಥಾರಿಟಿ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಸಬೇಕು. ಮಕ್ಕಳಿಲ್ಲದ ಪೋಷಕರು ಮಗು ದತ್ತು ಪಡೆಯಲು ನೋಂದಣಿ ನಂತರ ದಂಪತಿಗಳಿಬ್ಬರ ವಯೋಮಾನದ ಆಧಾರದ ಮೇಲೆ ಯಾವ ವಯಸ್ಸಿನ ಮಗು ದತ್ತು ಪಡೆಯಬಹುದೆಂದು ಮ್ಯಾಚ್ ಮಾಡಲಾಗುತ್ತದೆ. ಅವರ ವಯೋಮಾನ ಮತ್ತು ಷರತ್ತುಗಳನ್ನು ಪೂರೈಸಿದ ಪೋಷಕರಿಗೆ ಮಗುವನ್ನು ದತ್ತು ನೀಡಲು ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ.ಇಂದು ದತ್ತು ಪಡೆದ ದಂಪತಿಗೆ ವಿವಾಹವಾಗಿ 16 ವರ್ಷಗಳಿಂದ ಮಕ್ಕಳಿರಲಿಲ್ಲ, ಇವರು ಸುಮಾರು 40-45 ವರ್ಷದ ವಯೋಮಾನದ ಪೋಷಕರಾಗಿರುವರು. ಇವರಿಗೆ ನಾಲ್ಕು ತಿಂಗಳ ಮಗು ಮ್ಯಾಚ್ ಆಗಿದ್ದರಿಂದ ದತ್ತು ನೀಡಲಾಗಿದೆ. ಈ ಪೋಷಕರು 3 ವರ್ಷಗಳಿಂದ ನೋಂದಣಿ ಮಾಡಿಸಿ, ಮಗುವನ್ನು ದತ್ತು ಪಡೆಯಲು ಕಾಯುತ್ತಿದ್ದರು.
ಪೋಷಕರು ಮಗುವನ್ನು ದತ್ತು ಸ್ವೀಕರಿಸಿದ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಟಿ., ಮಕ್ಕಳ ರಕ್ಷಣಾಧಿಕಾರಿ ಚಂದ್ರಶೇಖರ್, ಅಧೀಕ್ಷಕರಾದ ಲತಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.- - -
(-ಫೋಟೋ: ಸಾಂದರ್ಭಿಕ ಚಿತ್ರ)