ಕಲಬುರಗಿ : ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದ ಅವಧಿಯಲ್ಲಿ ಸುಳ್ಳಿನದ್ದೇ ಕಾರುಬಾರು ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಕಲಬುರಗಿ ಜಿಲ್ಲೆ ಸೇಡಂನಲ್ಲಿ ಸೋಮವಾರ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಪರ ಪ್ರಚಾರ ಭಾಷಣದಲ್ಲಿ ಅವರು ಮಾತನಾಡಿದರು. ‘ಎಲ್ಲರಿಗೂ ನನ್ನ ನಮಸ್ಕಾರ’ ಎಂದು ಕನ್ನಡದಲ್ಲೇ ಮಾತು ಪ್ರಾರಂಭಿಸಿದ ಪ್ರಿಯಾಂಕಾ ಗಾಂಧಿ, ತಾವು ಸಭೆಗೆ ತಡವಾಗಿ ಬಂದಿರುವುದಕ್ಕೆ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಯಿಸಿದ್ದಕ್ಕೆ ಕ್ಷಮೆ ಕೋರಿದರು.
ತಮ್ಮ ಭಾಷಣದಲ್ಲಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ ಪ್ರಿಯಾಂಕಾ, ನಮ್ಮ ದೇಶ ಸತ್ಯಮೇವ ಜಯತೆ ಎನ್ನುವ ಮಾತನ್ನು ಅಕ್ಷರಶಃ ಪಾಲಿಸುವ ದೇಶವಾಗಿದೆ. ರಾಜಕೀಯ ಕೂಡಾ ಸತ್ಯದ ದಾರಿಯಲ್ಲೇ ನಡೆದಿದೆ. ಕಾಂಗ್ರೆಸ್ ಪಕ್ಷ ಸತ್ಯದ ರಾಜಕೀಯದ ಹಾದಿಯಲ್ಲೇ ನಡೆದಿದೆ. ಆದರೆ, ಕಳೆದ ಹತ್ತು ವರ್ಷಗಳಿಂದ ರಾಜಕೀಯದ ಹಾದಿ ಬದಲಾಗಿದೆ. ಇಲ್ಲಿ ಸತ್ಯಕ್ಕೆ ಜಾಗವಿಲ್ಲದಾಗಿದೆ. ಸುಳ್ಳೇ ಕಾರುಬಾರು ಮಾಡುತ್ತಿದೆ ಎಂದು ತಿವಿದರು. ಇದು ಬಸವಣ್ಣನವರ ಹಾಗೂ ಖಾಜಾ ಬಂದೇವನಾಜರ ಪ್ರವಿತ್ರ ಭೂಮಿ. ಸತ್ಯ ಹಾಗೂ ಕ್ರಾಂತಿ ಮತ್ತು ಖರ್ಗೆ ಅವರ ಕರ್ಮಭೂಮಿಯಾಗಿದೆ ಎಂದರು.
ಬಿಜೆಪಿಗೆ 400 ಸೀಟು ಈ ಸಲ ಸಿಕ್ಕರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಸಂವಿಧಾನದಿಂದ ಸಮಾಜದ ಎಲ್ಲ ವರ್ಗದವರಿಗೆ ಸಮಾನ ಅವಕಾಶ ಹಾಗೂ ಹಕ್ಕು ಸಿಗುತ್ತದೆ. ಆದರೆ, ಸಂವಿಧಾನ ಬದಲಾದರೆ ಎಲ್ಲ ಅವಕಾಶಗಳು ಕಳೆದು ಹೋಗಲಿವೆ ಎಂದರು.